Saudi Arabia | ಸಾಹಿಲ್ ಝಹೀರ್ ಗೆ ಇಂಡೋ ಅರಬ್ ಸೋಶಿಯಲ್ ಐಕನ್ ಪ್ರಶಸ್ತಿ

ಅಲ್ ಖೋಬರ್ (ಸೌದಿ ಅರೇಬಿಯ): ಸೌದಿ ಅರೇಬಿಯದ ಅಲ್ ಖೋಬರ್ ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅಂತರರಾಷ್ಟ್ರೀಯ ನಿರೂಪಕ ಸಾಹಿಲ್ ಝಹೀರ್ ಅವರಿಗೆ ‘ಇಂಡೋ ಅರಬ್ ಸೋಶಿಯಲ್ ಐಕನ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ SIBEC–SYPA ಇಂಟರ್ನ್ಯಾಷನಲ್ ಬಿಸಿನೆಸ್ & ಎಂಟರ್ಪ್ರೆನರ್ಸ್ ಚೇಂಬರ್ ನ ಸೌದಿ ಅರೇಬಿಯ ಚಾಪ್ಟರ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
SIBEC ಜಾಗತಿಕ ಉದ್ಯಮ ಮತ್ತು ಆರ್ಥಿಕ ಸಹಕಾರ ವೇದಿಕೆಯಾಗಿದ್ದು, ಉದ್ಯಮಿಗಳು, ಹೂಡಿಕೆದಾರರು ಮತ್ತು ವೃತ್ತಿಪರರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಕಾರ್ಯನಿರ್ವಹಿಸುತ್ತದೆ. ಸೌದಿ ಅರೇಬಿಯ ಚಾಪ್ಟರ್ ನ ಉದ್ಘಾಟನಾ ಕಾರ್ಯಕ್ರಮವನ್ನು ಎನರ್ಫ್ಯಾಕ್ ಸೊಲ್ಯೂಷನ್ಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಯಿತು.
ನಿರೂಪಕ ಹಾಗೂ ಈವೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಾಹಿಲ್ ಝಹೀರ್, ಈ ಹಿಂದೆ ‘ನಮ್ಮ ಟಿವಿ’ಯಲ್ಲಿ VJ ಆಗಿ ಮತ್ತು ರೇಡಿಯೋ ಮಿರ್ಚಿ 98.3 ಎಫ್ಎಂನಲ್ಲಿ ಆರ್ಜೆ ಆಗಿ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮಗಳು, ಕಾರ್ಪೊರೇಟ್ ಸಮಾರಂಭಗಳು ಮತ್ತು ಪ್ರಶಸ್ತಿ ಪ್ರದಾನ ವೇದಿಕೆಗಳಲ್ಲಿ ಅವರು ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಸೋನು ನಿಗಮ್, ಉದಿತ್ ನಾರಾಯಣ್ ಮತ್ತು ಶ್ರೇಯಾ ಘೋಷಾಲ್ ಮುಂತಾದ ಖ್ಯಾತ ಗಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡಿ ದ್ದಾರೆ. ಟಿ–10 ಮತ್ತು ಟಿ–20 ಸ್ವರೂಪಗಳ ಜೊತೆಗೆ ಐಪಿಎಲ್ ಸಂಬಂಧಿತ ಕಾರ್ಯಕ್ರಮಗಳನ್ನು ಒಳಗೊಂಡ ಕ್ರಿಕೆಟ್ ಪಂದ್ಯಾವಳಿಗಳಲ್ಲಿಯೂ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಅಲ್ ಖೋಬರ್ ನಲ್ಲಿ ನಡೆದ ‘Festival of Cricket – Women’s Edition’ ಕಾರ್ಯಕ್ರಮವನ್ನು ಅವರು ನಿರೂಪಿಸಿದ್ದು, ಇದನ್ನು ಸೌದಿ ಅರೇಬಿಯದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾದ ಮೊದಲ ಕ್ರಿಕೆಟ್ ಹಬ್ಬ.
ಭಾರತೀಯ ಮತ್ತು ಅರಬ್ ಪ್ರೇಕ್ಷಕರನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನೀಡಿದ ಕೊಡುಗೆಗಳು ಹಾಗೂ ನಿರೂಪಕರಾಗಿ ತೋರಿದ ಸಾಧನೆಯನ್ನು ಪರಿಗಣಿಸಿ ಸಾಹಿಲ್ ಝಹೀರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.






