ರಾಸ್ ಇಸಾ ಬಂದರು ತೊರೆಯುವಂತೆ ಸೌದಿ ಮೈತ್ರಿಕೂಟದ ಎಚ್ಚರಿಕೆ

ಸನಾ, ನ. 29: ಹೂತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟವು ರವಿವಾರ ಯಮನ್ನ ರಾಸ್ ಇಸಾ ಬಂದರನ್ನು ತೊರೆಯುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಬೆಂಬಲಿತ ಹೂತಿ ಗುಂಪು ಸೌದಿಯ ಹಲವು ನೆಲೆಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
'ನಾಗರಿಕರು ತಮ್ಮ ಸುರಕ್ಷತೆಗಾಗಿ, ಸ್ಥಳ ನಕ್ಷೆಯಲ್ಲಿ ತೋರಿಸಿರುವಂತೆ ರಾಸ್ ಇಸಾ ಬಂದರನ್ನು ತೊರೆಯುವಂತೆ ಮೈತ್ರಿಕೂಟದ ಜಂಟಿ ಪಡೆಗಳ ಕಮಾಂಡ್ ಕೋರುತ್ತಿದೆ' ಎಂದು ವಕ್ತಾರ ತುರ್ಕಿ ಅಲ್-ಮಲ್ಕಿ ಅವರು ಬಂದರಿನ ಚಿತ್ರದೊಂದಿಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಾದ ಕೆಲವೇ ನಿಮಿಷಗಳಲ್ಲಿ, ಕೆಂಪು ಸಮುದ್ರದ ತೀರದಲ್ಲಿರುವ ಜಿದ್ದಾ ಸೇರಿದಂತೆ ಸೌದಿ ಬಂದರುಗಳ ಮೇಲೆ ಪ್ರತಿದಾಳಿ ನಡೆಸುವುದಾಗಿ ಹೂತಿಗಳು ಬೆದರಿಕೆ ಹಾಕಿದ್ದಾರೆ. 'ಜಿದ್ದಾ ಬಂದರು ಮತ್ತು ಕೆಂಪು ಸಮುದ್ರದ ತೀರದಲ್ಲಿರುವ ಎಲ್ಲಾ ಶತ್ರು ಸೌದಿ ಬಂದರುಗಳನ್ನು ನಮ್ಮ ಪಡೆಗಳು ಗುರಿಯಾಗಿಸಲಿವೆ' ಎಂದು ಹೂತಿಗಳ ಸೇನಾ ವಕ್ತಾರ ಯಾಹ್ಯಾ ಸಾರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೌದಿ ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಿ ಹಾರಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಮೈತ್ರಿಕೂಟ ಹೇಳಿಕೊಂಡ ಕೆಲವೇ ಗಂಟೆಗಳ ನಂತರ ಈ ಎಚ್ಚರಿಕೆ ಬಂದಿದೆ.






