ಲಂಡನ್ ಹೋಟೆಲ್ನಲ್ಲಿ ಮೃತಪಟ್ಟ ಸೌದಿ ರಾಜಕುಮಾರ; ಸಾವಿಗೆ ಮದ್ಯ, ಡ್ರಗ್ಸ್, ಔಷಧಿಗಳ ಮಾರಕ ಸಂಯೋಜನೆಯೇ ಕಾರಣ: ವಿಚಾರಣೆಯಲ್ಲಿ ಬಹಿರಂಗ

Photo: Olympics website
ಲಂಡನ್: ಲಂಡನ್ ನ ಐಷಾರಾಮಿ ಹೋಟೆಲ್ನಲ್ಲಿ ಕಳೆದ ನವೆಂಬರ್ 25ರಂದು 29 ವರ್ಷದ ಸೌದಿ ರಾಜಕುಮಾರ ಮದ್ಯ, ಪಾರ್ಟಿ ಡ್ರಗ್ಸ್ ಹಾಗೂ ಪ್ರಿಸ್ಕ್ರಿಪ್ಷನ್ ಔಷಧಿಗಳ ಮಾರಕ ಸಂಯೋಜನೆಯನ್ನು ಸೇವಿಸಿದ ಪರಿಣಾಮ ಹೃದಯ ಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಯುನೈಟೆಡ್ ಕಿಂಗ್ಡಮ್ನ ಕರೋನರ್ ವಿಚಾರಣೆಯಲ್ಲಿ ಬಹಿರಂಗವಾಗಿದೆ.
ಅಬ್ದುಲ್ಲಾ ಬಿನ್ ಫಹಾದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲಝೀಝ್ ಬಿನ್ ಜಲವಿ ಅಲ್ ಸೌದ್ ಎಂದು ಗುರುತಿಸಲಾದ ರಾಜಕುಮಾರ ಕಳೆದ ನವೆಂಬರ್ 25ರಂದು ಕೆನ್ಸಿಂಗ್ಟನ್ನ ಮ್ಯಾರಿಯಟ್ ಹೋಟೆಲ್ ನ ತಮ್ಮ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬಹು–ಮಾದಕ ದ್ರವ್ಯ ಸೇವನೆಯಿಂದ ಉಂಟಾದ ಹೃದಯ ಸ್ತಂಭನವೇ ಸಾವಿಗೆ ಕಾರಣ ಎಂದು the sun ಹಾಗೂ daily mirror ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.
ಇನ್ನರ್ ವೆಸ್ಟ್ ಲಂಡನ್ ಕರೋನರ್ ನ್ಯಾಯಾಲಯದ ಮುಂದೆ ಮಂಡಿಸಲಾದ ಪುರಾವೆಗಳ ಪ್ರಕಾರ, ರಾಜಕುಮಾರ ನವೆಂಬರ್ 19ರಂದು ಒಂದು ವಾರದ ವಾಸ್ತವ್ಯಕ್ಕಾಗಿ ಪ್ರತಿ ರಾತ್ರಿ 600 ಯುರೋ ಬಾಡಿಗೆಯ ಹೋಟೆಲ್ಗೆ ಆಗಮಿಸಿದ್ದರು. ಸಾವಿಗೀಡಾಗುವ ಹಿಂದಿನ ಸಂಜೆ ಸಿಗರೇಟ್ ಸೇದಲು ಹೊರಗೆ ತೆರಳಿದ್ದ ವೇಳೆ ಅವರು ಕೊನೆಯ ಬಾರಿಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದರು.
ಮರುದಿನ ಹೋಟೆಲ್ನ ಸ್ವಚ್ಛತಾ ಸಿಬ್ಬಂದಿ ಐದನೇ ಮಹಡಿಯಲ್ಲಿದ್ದ ಅವರ ಕೊಠಡಿಗೆ ಪ್ರವೇಶಿಸಿದಾಗ, ಸ್ನಾನಗೃಹದ ನೆಲದ ಮೇಲೆ ಸಂಪೂರ್ಣ ಬಟ್ಟೆ ಧರಿಸಿದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು. ತಕ್ಷಣ ಹೋಟೆಲ್ ಸಿಬ್ಬಂದಿ ತುರ್ತು ವೈದ್ಯಕೀಯ ಸೇವೆಗೆ ಮಾಹಿತಿ ನೀಡಿದರು. ತುರ್ತು ವೈದ್ಯಕೀಯ ಸಿಬ್ಬಂದಿ ಅವರನ್ನು ಜೀವಂತಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ವಿಷಶಾಸ್ತ್ರ(Toxicology) ಪರೀಕ್ಷೆಯಲ್ಲಿ ರಾಜಕುಮಾರನ ರಕ್ತದಲ್ಲಿ 100 ಮಿಲಿ ರಕ್ತಕ್ಕೆ 222 ಮಿಗ್ರಾಂ ಆಲ್ಕೋಹಾಲ್ ಸಾಂದ್ರತೆ ಪತ್ತೆಯಾಗಿದೆ. ಇದು ಇಂಗ್ಲೆಂಡ್ನಲ್ಲಿ ವಾಹನ ಚಾಲನೆಗೆ ನಿಗದಿಪಡಿಸಿರುವ ಕಾನೂನುಬದ್ಧ ಮಿತಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ಇದರ ಜೊತೆಗೆ ಸಾಮಾನ್ಯವಾಗಿ ಪಾರ್ಟಿ ಡ್ರಗ್ ಎಂದು ಕರೆಯಲಾಗುವ ಗಾಮಾ–ಹೈಡ್ರಾಕ್ಸಿಬ್ಯುಟೈರೇಟ್ (GHB) ಮಾರಕ ಪ್ರಮಾಣದಲ್ಲಿ ಪತ್ತೆಯಾಗಿದೆ. ಚಿಕಿತ್ಸಕ ಪ್ರಮಾಣದಲ್ಲಿ ಗಾಂಜಾ, ಕ್ಸಾನಾಕ್ಸ್ ಹಾಗೂ ಇತರ ಆತಂಕ–ವಿರೋಧಿ ಔಷಧಿಗಳ ಕುರುಹುಗಳೂ ಪತ್ತೆಯಾಗಿವೆ. ಈ ಎಲ್ಲ ವಸ್ತುಗಳ ಸಂಯೋಜನೆಯೇ ಹೃದಯ ಸ್ತಂಭನಕ್ಕೆ ಕಾರಣವಾಗಿ ಅಂತಿಮವಾಗಿ ಸಾವಿಗೆ ದಾರಿ ಮಾಡಿಕೊಟ್ಟಿದೆ ಎಂದು ವೈದ್ಯಕೀಯ ತಜ್ಞರು ತೀರ್ಮಾನಿಸಿದ್ದಾರೆ.
ವ್ಯಸನಕ್ಕೆ ಚಿಕಿತ್ಸೆ ಪಡೆದಿದ್ದರು
ರಾಜಕುಮಾರ ಅಬ್ದುಲ್ಲಾ ಮದ್ಯದ ಚಟ ಹಾಗೂ ವೈದ್ಯರು ಸೂಚಿಸುವ ಔಷಧಿಗಳ ವ್ಯಸನದಿಂದ ಬಳಲುತ್ತಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಅವರನ್ನು 2025ರ ಆಗಸ್ಟ್ನಲ್ಲಿ ರೋಹ್ಯಾಂಪ್ಟನ್ನ ಪ್ರಿಯರಿ ಚಿಕಿತ್ಸಾಲಯಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಮದ್ಯ, ಬೆಂಜೊಡಿಯಜೆಪೈನ್ಗಳು ಹಾಗೂ ಪ್ರಿಗಬಾಲಿನ್ ವ್ಯಸನಕ್ಕೆ ವ್ಯಸನಮುಕ್ತಿ ಚಿಕಿತ್ಸೆ ನೀಡಲಾಗಿತ್ತು.
ಮನೋವೈದ್ಯಕೀಯ ಸಲಹೆಗಾರ ಡಾ. ವಿಕ್ಟೋರಿಯಾ ಚಮೊರೊ ಅವರ ಪ್ರಕಾರ, ರಾಜಕುಮಾರ ಚಿಕಿತ್ಸೆಗೆ ಉತ್ತಮ ಸ್ಪಂದನೆ ನೀಡಿದ್ದರು. ಅವರಿಗೆ ಆತಂಕ ಮತ್ತು ಖಿನ್ನತೆಯ ಲಕ್ಷಣಗಳಿದ್ದರೂ, ವ್ಯಸನಮುಕ್ತಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ನಂತರ ನಿಗದಿತ ಮರುಪರಿಶೀಲನೆಗೆ ಹಾಜರಾಗದಿದ್ದರೂ, ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಅವರು ಸ್ವಯಂ ಹಾನಿ ಮಾಡಿಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ವೈದ್ಯರು ಪರಿಗಣಿಸಿರಲಿಲ್ಲ.
ಪ್ರಿಯರಿ ಚಿಕಿತ್ಸೆಯ ಬಳಿಕ ಅವರು ಮರ್ಸಿಸೈಡ್ನ ರೇನ್ಫೋರ್ಡ್ ಹಾಲ್ ಕ್ಲಿನಿಕ್ನಲ್ಲೂ ಚಿಕಿತ್ಸೆ ಪಡೆದಿದ್ದರು. ಅಕ್ಟೋಬರ್ನಲ್ಲಿ ಮೇಲ್ಭಾಗದ ಉಸಿರಾಟದ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಅಲ್ಲಿಂದ ಬಿಡುಗಡೆಯಾಗಿದ್ದರು ಎಂದು ವಿಚಾರಣೆಯಲ್ಲಿ ಮಂಡಿಸಲಾದ ದಾಖಲೆಗಳು ತಿಳಿಸಿವೆ.
ಆತ್ಮಹತ್ಯೆಯ ಯಾವುದೇ ಪುರಾವೆ ಇಲ್ಲ
ರಾಜಕುಮಾರ ತಮ್ಮ ಜೀವನವನ್ನು ಕೊನೆಗೊಳಿಸುವ ಉದ್ದೇಶ ಹೊಂದಿದ್ದರು ಎಂಬುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ ಎಂದು ಸಹಾಯಕ ಕರೋನರ್ ಜೀನ್ ಹಾರ್ಕಿನ್ ತಿಳಿಸಿದ್ದಾರೆ.
ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಆತ್ಮಹತ್ಯೆಯ ಆಲೋಚನೆಗಳನ್ನು ಅವರು ವ್ಯಕ್ತಪಡಿಸಿದ್ದರೆಂಬ ಸೂಚನೆಯೂ ಇಲ್ಲ. ಮೂರನೇ ವ್ಯಕ್ತಿಯ ಪಾತ್ರಕ್ಕೂ ಯಾವುದೇ ಪುರಾವೆ ದೊರೆತಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲೂ ಸಾವಿಗೆ ಮೊದಲ ಕೊನೆಯ ಗಂಟೆಗಳಲ್ಲಿ ಅವರು ಒಬ್ಬರೇ ಇರುವುದು ದೃಢಪಟ್ಟಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ದುರದೃಷ್ಟಕರ ಸಾವಿನ ತೀರ್ಪು ದಾಖಲಿಸಿದ ಸಹಾಯಕ ಕರೋನರ್ ಜೀನ್ ಹಾರ್ಕಿನ್, ವೈದ್ಯಕೀಯವಾಗಿ ಬಹು–ಮಾದಕ ದ್ರವ್ಯ ಸೇವನೆಯೇ ಸಾವಿಗೆ ಕಾರಣ ಎಂದು ತೀರ್ಪು ನೀಡಿದರು. ಅಲ್ಲದೆ ರಾಜಕುಮಾರನ ಕುಟುಂಬಕ್ಕೆ ಸಂತಾಪ ಸೂಚಿಸಿದರು.
ಬಳಿಕ ಸೌದಿ ರಾಯಲ್ ಕೋರ್ಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ರಾಜಕುಮಾರ ಅಬ್ದುಲ್ಲಾ ಅವರ ನಿಧನವನ್ನು ದೃಢಪಡಿಸಿತು. ರಿಯಾದ್ನ ವಿಐಪಿ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆಗಳು ನಡೆಯಲಿವೆ ಎಂದು ತಿಳಿಸಿತು.






