ಶಾರ್ಜಾ | ಫ್ಲ್ಯಾಟ್‌ನಿಂದ ಬಿದ್ದು 7 ವರ್ಷದ ಕೇರಳ ಮೂಲದ ಬಾಲಕಿ ಮೃತ್ಯು
► ಮನೆಯಲ್ಲೇ ಒಂಟಿಯಾಗಿದ್ದ ವೇಳೆ ದುರಂತ ► ಕೇರಳ ಮೂಲದ ದಂಪತಿಯ ಏಕೈಕ ಪುತ್ರಿ

ಶಾರ್ಜಾ: ಶಾರ್ಜಾದ ಮೂರನೇ ಮಹಡಿಯ ಫ್ಲ್ಯಾಟ್‌ನಿಂದ ಬಿದ್ದು 7 ವರ್ಷದ ಭಾರತೀಯ ಮೂಲದ ಬಾಲಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಮೃತ ಬಾಲಕಿಯನ್ನು ಸಫಾ ಮುಬಾರಕ್ ಎಂದು ಗುರುತಿಸಲಾಗಿದೆ.
ಶಾರ್ಜಾದ ಅಲ್ ನಬ್ಬಾ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ಬಾಲಕಿ ಒಂಟಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.
ಅಜ್ಮಾನ್‌ನ ಶಾಲೆಯೊಂದರಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಫಾ, ಕೇರಳ ಮೂಲದ ದಂಪತಿಯ ಏಕೈಕ ಪುತ್ರಿಯಾಗಿದ್ದಳು.
ಕಿಟಕಿ ತೆರೆಯುವ ವೇಳೆ ನಡೆದ ಅವಘಡ!
ಶಾರ್ಜಾದ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮುರ್ಷಿದಾ ಮುಬಾರಕ್ ಕೆಲಸಕ್ಕೆ ತೆರಳಿದ್ದು, ಸಫಾ ಮನೆಯಲ್ಲಿ ಮಲಗಿದ್ದ ವೇಳೆ ಆಕೆಯ ತಂದೆ ಮುಬಾರಕ್ ಅಲಿ ಫ್ಲ್ಯಾಟ್‌ನಿಂದ ಕೆಳಗೆ ಬಂದು ತನ್ನ ಕಾರಿನತ್ತ ತೆರಳಿದ್ದರು. ಬಾಲಕಿ ಎಚ್ಚರಗೊಂಡ ಬಳಿಕ ಕಿಟಕಿಯ ಸ್ಲೈಡಿಂಗ್ ಬಾಗಿಲು ತೆರೆದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.
ದುಬೈನ ಆರೋಗ್ಯ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮುಬಾರಕ್ ಅಲಿ ಅವರು ಘಟನೆ ನಡೆದ ಸಂದರ್ಭದಲ್ಲಿ ಮನೆಯ ಕೆಳಭಾಗದಲ್ಲೇ ಇದ್ದರು ಎನ್ನಲಾಗಿದೆ.
ಶಾಲೆಗೆ ಮರಳುವ ನಿರೀಕ್ಷೆಯಲ್ಲಿದ್ದ ಬಾಲಕಿ
ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಿದ್ದ ಕುಟುಂಬ ಕೆಲವು ದಿನಗಳ ಹಿಂದೆಯಷ್ಟೇ ಶಾರ್ಜಾಕ್ಕೆ ಹಿಂದಿರುಗಿತ್ತು. ಮುಂದಿನ ವಾರ ಶಾಲೆ ಪುನರಾರಂಭವಾಗಲಿದ್ದು, ಸಫಾ ಶಾಲೆಗೆ ಮರಳುವ ನಿರೀಕ್ಷೆಯಲ್ಲಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದುರಂತದ ಬಳಿಕ ಬಾಲಕಿಯ ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದು, ಸಫಾ ಅವರ ಅಂತ್ಯಕ್ರಿಯೆಯನ್ನು ಯುಎಇಯಲ್ಲೇ ನಡೆಸಲು ಕುಟುಂಬ ನಿರ್ಧರಿಸಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಘಟನೆ ಕುರಿತು ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






