ದುಬೈ | ಸಾಹೇಬಾನ್ ವೃತ್ತಿಪರರು, ಉದ್ಯಮಿಗಳಿಗಾಗಿ SPAEN ನಿಂದ ನೆಟ್‌ವರ್ಕಿಂಗ್ ಸೆಷನ್ ಕಾರ್ಯಕ್ರಮ

ದುಬೈ: ಇಲ್ಲಿನ ಬರ್ಷಾದಲ್ಲಿರುವ ನೊವೊಟೆಲ್ ಹೋಟೆಲ್ ನಲ್ಲಿ ಇತ್ತೀಚೆಗೆ ದಿ ಸಾಹೆಬಾನ್ ಪ್ರೊಫೆಶನಲ್ ಎಂಡ್ ಆಂಟ್ರೆಪ್ರೆನೇರಿಯಲ್ ನೆಟ್ ವರ್ಕ್ (SPAEN) ಇತ್ತೀಚೆಗೆ ಹೈ ಇಂಪ್ಯಾಕ್ಟ್ ನೆಟ್ ವರ್ಕಿಂಗ್ ಸೆಷನ್ ಅನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಸಾಹೇಬಾನ್ ಸಮುದಾಯದ ಉದ್ಯಮ ಕ್ಷೇತ್ರದ ಗಣ್ಯರು, ಅನುಭವಿ ವೃತ್ತಿಪರರು, ಉದಯೋನ್ಮುಖ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್ ಸ್ಥಾಪಕರು ಸೇರಿ ಪರಸ್ಪರ ಚರ್ಚೆ, ಸಂವಾದ, ವಿಚಾರ ವಿನಿಮಯ ನಡೆಸಿದರು.
ಪರಸ್ಪರ ಸಹಕಾರ, ಸಂಪರ್ಕವನ್ನು ಬೆಳೆಸಲು ಸಹಕಾರಿಯಾಗುವಂತೆ ಆಯೋಜಿಸಿದ್ದ ಕಾರ್ಯಕ್ರಮವು ನೆರೆದಿದ್ದ ಉದ್ಯಮಿಗಳ ಸ್ವಯಂ ಪರಿಚಯದೊಂದಿಗೆ ಪ್ರಾರಂಭವಾಯಿತು. ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಅನಿವಾಸಿ ಸಾಹೇಬಾನ್ ಉದ್ಯಮಿಗಳಾದ ನಾಸಿರ್ ಸೈಯದ್, ಎಚ್ ಎಂ ಅಫ್ರೋಝ್ ಅಸ್ಸಾದಿ ಮತ್ತು ಮುಹಮ್ಮದ್ ಅಕ್ರಮ್ ಅವರು ಭಾಗವಹಿಸಿದ್ದರು. ತಮ್ಮ ಉದ್ಯಮ ಲೋಕದ ಪ್ರಯಾಣ ಮತ್ತು ಯಶಸ್ವಿ ಉದ್ಯಮಗಳನ್ನು ರೂಪಿಸುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.
ಸಿ ಎ ಅಜ್ಮಲ್ ಎಂ. ಕೆ. ಯುಎಇಯಲ್ಲಿ ಕಾರ್ಪೊರೇಟ್ ತೆರಿಗೆ ಕುರಿತು ಮಾಹಿತಿ ನೀಡಿದರು. ದಾನಿಶ್ ಫರೀದ್ ಇಕ್ಬಾಲ್ ಅವರು ಯುಎಇ ಯಲ್ಲಿ ರಿಯಲ್ ಎಸ್ಟೇಟ್ ಹೂಡಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು. ಪೆಟ್ರೋಸೊಲ್ಯೂಷನ್ಸ್ ಸಂಸ್ಥೆಯ ಪ್ರತಿನಿಧಿಗಳು ಯುಎಇ ಮೂಲದ ತಮ್ಮ ವ್ಯಾಪಾರ ವ್ಯವಹಾರಕ್ಕಾಗಿ ಭಾರತದಲ್ಲಿ ಬ್ಯಾಕ್-ಆಫೀಸ್ ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಯುವ ನವೋದ್ಯಮಿ ಅಲ್ಹಾನ್ ಅಹ್ಮದ್ ಅವರು ಸ್ಟಾರ್ಟ್ ಅಪ್ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ಹೂಡಿಕೆದಾರರಿಗೆ ಪರಿಣಾಮಕಾರಿಯಾಗಿ ಯೋಜನೆಗಳನ್ನು ಹೇಗೆ ನೀಡುವುದು ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಂಡರು.
ಇನ್ ಸ್ಟಾಚೆಫ್ ನ ಸಿಇಒ ಮತ್ತು ಸ್ಥಾಪಕ ಮುಹಮ್ಮದ್ ಆರಿಫ್ ಮತ್ತು ಏಷ್ಯನ್ ಟೆಕ್ ಎಂಜಿನಿಯರಿಂಗ್ ಸೇವೆಗಳ ಸ್ಥಾಪಕ ಸುಹೈಬ್ ಅಹ್ಮದ್ ಅವರು ತಮ್ಮ ಉದ್ಯಮಗಳು ಮತ್ತು ಭವಿಷ್ಯದ ಸಾಧ್ಯತೆಗಳ ಬಗ್ಗೆ ಉಪಯುಕ್ತ ಮಾಹಿತಿ ಹಾಗು ಮಾರ್ಗದರ್ಶನ ನೀಡಿದರು.
ಈ ಸೆಷನ್ ನಲ್ಲಿ ಯುಎಇ ಮತ್ತು ಮಸ್ಕತ್ ನ ಪ್ರಸಿದ್ಧ ಉದ್ಯಮಿಗಳಾದ ಕೆ.ಎಂ. ರಕೀಮ್ ಅಹ್ಮದ್, ಕೆ.ಎಂ. ಅಝೀಮ್ ಮತ್ತು ಫೈಸಲ್ ಅಹ್ಮದ್ ಭಾಗವಹಿಸಿದ್ದರು.
ಸಾಹೇಬಾನ್ ಸಮುದಾಯದ ಯುವ ಹಾಗು ಹಿರಿಯ ಉದ್ಯಮಿಗಳ ಸಮಾಗಮವಾಗಿದ್ದ ಈ ವಿಶಿಷ್ಟ ಕಾರ್ಯಕ್ರಮವನ್ನು ನಾರ್ದರ್ನ್ ಇನ್ಶುರೆನ್ಸ್ ಬ್ರೋಕರ್ಸ್ ಪ್ರಾಯೋಜಿಸಿತ್ತು. SPAEN ನ ಎಚ್ ಎಂ ಅಫ್ರೋಝ್ ಅಸ್ಸಾದಿ, ಅಲ್ತಾಫ್ ಎಂ. ಎಸ್., ಅಲ್ತಾಫ್ ಖಲೀಫೆ, ಸಮಿಯುಲ್ಲಾಹ ಎಂ. ಎಚ್., ಮುಹಮ್ಮದ್ ಅಕ್ರಮ್, ಅಜ್ಮಲ್ ಮುಹಮ್ಮದ್, ಸುಹೈಲ್ ಕುದ್ರೋಳಿ, ಆಸಿಫ್ ಎಂ. ಹುಸೇನ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮುಹಮ್ಮದ್ ಮೊಹ್ಸಿನ್ ಸಹಕಾರ ನೀಡಿದರು.