ಪ್ರಸ್ತುತ ಪರಿಸ್ಥಿತಿ ಸುರಕ್ಷಿತ - ಸ್ಥಿರವಾಗಿದೆ: ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ

ಮನಾಮಾ: ಅಮೇರಿಕ - ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಹರೈನ್ ದೇಶವು ಇನ್ನೂ ಸುರಕ್ಷಿತ ಮತ್ತು ಸ್ಥಿರವಾಗಿದೆ. ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಾಗರಿಕರು ಮತ್ತು ನಿವಾಸಿಗಳಲ್ಲಿ ಕೆಲವು ಆತಂಕಗಳು ಕಂಡುಬಂದರೂ, ದೇಶದ ಒಟ್ಟಾರೆ ಪರಿಸ್ಥಿತಿ ಅಸ್ಥಿರವಾಗಿಲ್ಲ ಮತ್ತು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ದೈನಂದಿನ ಜೀವನ ಮುಂದುವರಿಯುತ್ತಿದೆ ಎಂದಿದ್ದಾರೆ.
ಬಹರೈನ್ ಸರಕಾರವು ನಾಗರಿಕರು ಹಾಗೂ ನಿವಾಸಿಗಳ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಲು ಸಾಧ್ಯ ವಾದ ಎಲ್ಲಾ ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಸಹಕಾರ ನೀಡುತ್ತಿದೆ. ಸರಕಾರ ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದೆ.
ಪ್ರಸ್ತುತ ಪರಿಸ್ಥಿತಿಯ ಕಾರಣದಿಂದ ಕೆಲವು ವಾಣಿಜ್ಯ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಮಟ್ಟಿನ ನಿಧಾನತೆ ಕಾಣುತ್ತಿದೆ. ಇದರಿಂದ ಹಲವರು ಮನಸ್ಸಿನಲ್ಲಿ ಆತಂಕ ಮತ್ತು ಒತ್ತಡ ಅನುಭವಿಸುತ್ತಿರುವುದು ಸಹಜ. ಆದರೆ ಎಲ್ಲರೂ ಧೈರ್ಯದಿಂದ ಮತ್ತು ಪರಸ್ಪರ ಸಹಕಾರದಿಂದ ಈ ಸವಾಲಿನ ಸಮಯವನ್ನು ಎದುರಿಸುತ್ತಿದ್ದಾರೆ ಎಂದು ಅಜಿತ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ, ಬಹರೈನ್ ಕನ್ನಡ ಸಂಘವು ಅಗತ್ಯವಿರುವ ಕನ್ನಡಿಗರಿಗಾಗಿ ಹೆಲ್ಪ್‌ಲೈನ್ ಹಾಗೂ ತಾತ್ಕಾಲಿಕ ಆಶ್ರಯ ವ್ಯವಸ್ಥೆಯನ್ನು ಮಾಡಿದೆ. ತಾಯಿನಾಡಿಗೆ ಮರಳಲು ಬಯಸುವ ಕನ್ನಡಿಗರಿಗಾಗಿ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಸಂಬಂಧಿತ ಅಧಿಕಾರಿಗಳ ಅನುಮತಿ ದೊರೆತ ನಂತರ ರಿಪ್ಯಾಟ್ರಿಯೇಷನ್ (ತವರಿಗೆ ವಾಪಸ್ಸು) ವಿಮಾನ ವ್ಯವಸ್ಥೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಯುದ್ಧ ಪರಿಸ್ಥಿತಿ ಶೀಘ್ರವೇ ಅಂತ್ಯಗೊಳ್ಳಲಿ ಎಂಬ ಆಶಯವಿದ್ದು, ಬಹರೈನ್ ಈ ಪರಿಸ್ಥಿತಿಯನ್ನು ಬೇಗ ದಾಟಿ ಮತ್ತೆ ಸಾಮಾನ್ಯ ಜೀವನ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲಿದೆ ಎಂಬ ವಿಶ್ವಾಸವಿದೆ ಎಂದು ಅಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







