29 ವರ್ಷಗಳ ಸೇವೆಯ ಮಹತ್ವದ ಮೈಲಿಗಲ್ಲು ಸಾಧಿಸಿದ ʼತುಂಬೆ ಗ್ರೂಪ್ʼ

ಯುಎಇ : ತುಂಬೆ ಗ್ರೂಪ್ ಯುಎಇಯಲ್ಲಿ ತನ್ನ 29 ವರ್ಷಗಳ ಸಾರ್ಥಕ ಪ್ರಯಾಣವನ್ನು ಪೂರ್ಣಗೊಳಿಸಿದ್ದು, ಆರೋಗ್ಯ ಸೇವೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಮಾರು ಮೂರು ದಶಕಗಳ ಸೇವೆಯ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
1997ರಲ್ಲಿ ಡಾ.ಮೊಯ್ದೀನ್ ಅವರು ತುಂಬೆ ಗ್ರೂಪ್ ಅನ್ನು ಸ್ಥಾಪಿಸಿದರು. ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಗಳು, ಸಂಶೋಧನೆ, ತಂತ್ರಜ್ಞಾನ, ಮಾಧ್ಯಮ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ತುಂಬೆ ಗ್ರೂಪ್ ಬೆಳೆದಿದೆ.
ಈ ಗ್ರೂಪ್ ನ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ʼಗಲ್ಫ್ ಮೆಡಿಕಲ್ ಯುನಿವರ್ಸಿಟಿʼ ಗಲ್ಫ್ ಪ್ರದೇಶದ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾಗಿದೆ. ಇದು ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಯ ಕೇಂದ್ರವಾಗಿದೆ.
ಈ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಮೆಡಿಕಲ್, ನರ್ಸಿಂಗ್, ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಪಶುವೈದ್ಯಕೀಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತಿದೆ.
ʼಗಲ್ಫ್ ಮೆಡಿಕಲ್ ಯುನಿವರ್ಸಿಟಿʼ ಜೊತೆಯಾಗಿ ಕಾರ್ಯನಿರ್ವಹಿಸುತ್ತಿರುವ ತುಂಬೆ ಹೆಲ್ ಕೇರ್ ನೆಟ್ವರ್ಕ್ ಈ ಪ್ರದೇಶದ ಪ್ರಮುಖ ಖಾಸಗಿ ಆಸ್ಪತ್ರೆಗಳ ಜಾಲವಾಗಿದೆ. ಕಳೆದ 29 ವರ್ಷಗಳಲ್ಲಿ 175ಕ್ಕೂ ಹೆಚ್ಚು ದೇಶಗಳ ಸುಮಾರು 1.6 ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಹೆರಿಗೆ ನಡೆದಿದೆ.
ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ತುಂಬೆ ಇಂಟರ್ ನ್ಯಾಷನಲ್ ರಿಸರ್ಚ್ ಗ್ರ್ಯಾಂಟ್ (Thumbay International Research Grant) ಯೋಜನೆಯಡಿ ವರ್ಷಕ್ಕೆ 3 ಮಿಲಿಯನ್ ದಿರ್ಹಮ್ ಅನುದಾನ ನೀಡಲಾಗುತ್ತಿದೆ. ಶೀಘ್ರದಲ್ಲೇ ಆರಂಭವಾಗಲಿರುವ ತುಂಬೆ ಇಂಟರ್ ನ್ಯಾಷನಲ್ ರಿಸರ್ಚ್ ಸೆಂಟರ್ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಉತ್ತೇಜನ ನೀಡಲಿದೆ.
ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಹೊರತಾಗಿ, ತುಂಬೆ ಗ್ರೂಪ್ ಉದ್ಯಮಗಳು, ರೆಸ್ಟೋರೆಂಟ್ ಗಳು ಮತ್ತು ಫಿಟ್ನೆಸ್ ಕೇಂದ್ರಗಳನ್ನು ಮುನ್ನಡೆಸುತ್ತಿದೆ. ಇದಲ್ಲದೆ ಹೆಲ್ತ್ ಮ್ಯಾಗಝೀನ್ ಬಿಡುಗಡೆ ಮಾಡುತ್ತಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಸೇರಿದಂತೆ ಹಲವಾರು ವ್ಯವಹಾರಗಳನ್ನು ನಡೆಸುತ್ತಿದೆ.
ಪ್ರಸ್ತುತ ತುಂಬೆ ಗ್ರೂಪ್ 7 ಅಕಾಡೆಮಿಕ್ ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಡೆಸುತ್ತಿದ್ದು, ವೈದ್ಯಕೀಯ ಪ್ರವಾಸೋದ್ಯಮದ ಮೂಲಕ 87 ದೇಶಗಳಲ್ಲಿ ತನ್ನ ಪ್ರತಿನಿಧಿತ್ವವನ್ನು ಹೊಂದಿದೆ. ಇದಲ್ಲದೆ, ಕ್ಲಿನಿಕಲ್ ಸೇವೆಗಳು, ಶಿಕ್ಷಣ, ಸಂಶೋಧನೆ ಮತ್ತು ಡಿಜಿಟಲ್ ಆರೋಗ್ಯ ಉಪಕ್ರಮಗಳನ್ನು ಸಂಯೋಜಿಸುವ ಸಮಗ್ರ ಆರೋಗ್ಯ ರಕ್ಷಣಾ ತಾಣವಾಗಿ ದುಬೈನಲ್ಲಿ ತುಂಬೆ ಮೆಡಿಸಿಟಿ ಅಭಿವೃದ್ಧಿಯಾಗುತ್ತಿದೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮಾತನಾಡಿ, “ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಗಳ ಮೂಲಕ ಸಮಾಜವನ್ನು ರೂಪಿಸುವ ದೃಷ್ಟಿಯಿಂದ ನಮ್ಮ ಪಯಣ ಮುಂದುವರಿಯುತ್ತಿದೆ. ಯುಎಇ ಈ ಕನಸನ್ನು ಸಾಕಾರಗೊಳಿಸಲು ಅಗತ್ಯವಾದ ಅವಕಾಶಗಳನ್ನು ಒದಗಿಸಿದೆ" ಎಂದು ಹೇಳಿದರು.






