ಯುಎಇ | ಗಲ್ಫ್ ಮೆಡಿಕಲ್ ವಿವಿಯಲ್ಲಿ ʼತುಂಬೆ ಲ್ಯಾಬ್ ಫಾರ್ ಎಐ ಇನ್ ಹೆಲ್ತ್‌ಕೇರ್ʼ ಉದ್ಘಾಟನೆ

ಯುಎಇ : ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ (GMU) ತುಂಬೆ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು AI ಇನ್ ಹೆಲ್ತ್‌ಕೇರ್, ʼಆರೋಗ್ಯ ರಕ್ಷಣೆಯಲ್ಲಿ AIಗಾಗಿ ಅತ್ಯಾಧುನಿಕ ತುಂಬೆ ಲ್ಯಾಬ್ʼ(ತುಂಬೆ ಲ್ಯಾಬ್ ಫಾರ್ ಎಐ ಇನ್ ಹೆಲ್ತ್‌ಕೇರ್) ಉದ್ಘಾಟಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅನ್ವಯಿಕೆ, ಶಿಕ್ಷಣ ಮತ್ತು ಸಂಶೋಧನೆಯನ್ನು ಮುನ್ನಡೆಸುವ ಗುರಿಯನ್ನು ಈ ಮೂಲಕ ಹೊಂದಿದೆ.
ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಖ್ಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ತುಂಬೆ ಮೊಯ್ದೀನ್, ʼವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವ ನಮ್ಮ ಬದ್ಧತೆಯನ್ನು ಈ ಪ್ರಯೋಗಾಲಯ ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸಂಶೋಧನೆಯಲ್ಲಿ ಸಹಕರಿಸಲಿದೆʼ ಎಂದು ಹೇಳಿದರು.
ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಅವರು ಮಾತನಾಡಿ, ಈ ಪ್ರಯೋಗಾಲಯ ನಮ್ಮ ವಿದ್ಯಾರ್ಥಿಗಳನ್ನು ಉದಯೋನ್ಮುಖ ತಂತ್ರಜ್ಞಾನಗಳಿಗೆ ಪ್ರಾಯೋಗಿಕವಾಗಿ ಒಡ್ಡಿಕೊಳ್ಳುವಂತೆ ಮಾಡಿ ಅವರ ಶೈಕ್ಷಣಿಕ ಅನುಭವವನ್ನು ಬಲಗೊಳಿಸುತ್ತದೆ. ಆರೋಗ್ಯ ರಕ್ಷಣೆಯಲ್ಲಿ ಸಂಶೋಧನೆ ಮತ್ತು ನೈಜ ಸಮಸ್ಯೆ ಪರಿಹಾರಕ್ಕೆ ಹೊಸ ಹಾದಿಯನ್ನು ತೋರಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು, ಉದ್ಯಮ ಪಾಲುದಾರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೊಸದಾಗಿ ಪ್ರಾರಂಭಿಸಲಾದ ಪ್ರಯೋಗಾಲಯ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವದಲ್ಲಿರುವ AI-ಸಂಬಂಧಿತ ಕಾರ್ಯಕ್ರಮಗಳನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ. ರೋಗನಿರ್ಣಯ, ರೋಗಿಗಳ ಆರೈಕೆ ಸೇರಿದಂತೆ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ AI ಬಳಕೆಗೆ ಅನುವು ಮಾಡಿಕೊಡುತ್ತದೆ. ಇದು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಆರೋಗ್ಯ ವೃತ್ತಿಪರರಿಗೆ ಕ್ರಿಯಾತ್ಮಕ ಕಲಿಕೆ ಮತ್ತು ಸಂಶೋಧನೆಗೆ ಅವಕಾಶವನ್ನು ಕಲ್ಪಿಸುತ್ತದೆ.
ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ಮತ್ತು ಆರೋಗ್ಯ ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ (Master in Artificial Intelligence and Health Informatics), ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಸರ್ಟಿಫಿಕೆಟ್ ಕೋರ್ಸ್ (Certificate Course in Artificial Intelligence in Healthcare), ಆರೋಗ್ಯ ರಕ್ಷಣೆಯಲ್ಲಿ ಜನರೇಟಿವ್ AI (GenAI) ಕುರಿತು ಸರ್ಟಿಫಿಕೆಟ್ ಕೋರ್ಸ್ (Certificate Course in Generative AI (GenAI) in Healthcare)ಗಳಿವೆ. ಈ ಕೋರ್ಸ್‌ಗಳು ಪ್ರಸ್ತುತ ದಾಖಲಾತಿಗೆ ಮುಕ್ತವಾಗಿವೆ. ಈ ಕುರಿತ ಹೆಚ್ಚಿನ ವಿವರಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ http://www.gmu.ac.ae ನಲ್ಲಿ ಲಭ್ಯವಿದೆ.
1998ರಲ್ಲಿ ಯುಎಇಯ ಅಜ್ಮಾನ್‌ನಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯ ಯುಎಇಯ ಅತ್ಯಂತ ಕ್ರಿಯಾತ್ಮಕ ಮತ್ತು ದೊಡ್ಡ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದು ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ, ಆರೋಗ್ಯ ವಿಜ್ಞಾನ, ನರ್ಸಿಂಗ್, ಆರೋಗ್ಯ ನಿರ್ವಹಣೆ ಮತ್ತು ಆರೋಗ್ಯ ರಕ್ಷಣೆಯಲ್ಲಿ AI ಕುರಿತು ಶಿಕ್ಞಣವನ್ನು ನೀಡುತ್ತದೆ.