ದುಬೈನಲ್ಲಿ ‘ತುಂಬೆ ಮೆಡಿಸಿಟಿ’ ಉದ್ಘಾಟನೆ| 3 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ, 1 ಸಾವಿರ ಉದ್ಯೋಗ ಸೃಷ್ಟಿ

ದುಬೈ: ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ‘ತುಂಬೆ ಮೆಡಿಸಿಟಿ ದುಬೈ’ ಯೋಜನೆಯನ್ನು ತುಂಬೆ ಗ್ರೂಪ್, ಅಲ್ ಕುಸೈಸ್ ಪ್ರದೇಶದಲ್ಲಿ ಆರಂಭಿಸಿದೆ.
ಸಮಗ್ರ ಶೈಕ್ಷಣಿಕ ಮತ್ತು ಆರೋಗ್ಯ ನಗರವಾಗಿ ರೂಪುಗೊಂಡಿರುವ ಈ ತಾಣವು ಪ್ರಾರಂಭಿಕ ಹಂತದಲ್ಲೇ ಸುಮಾರು 3,000 ವಿದ್ಯಾರ್ಥಿಗಳಿಗೆ ಅವಕಾಶ, 1,000 ಉದ್ಯೋಗ ಸೃಷ್ಟಿ ಹಾಗೂ 6,000 ಜನರ ವಾಸ್ತವ್ಯ ಸಾಮರ್ಥ್ಯ ಹೊಂದಿರುವುದು ವಿಶೇಷ.
ನಗರದೊಳಗಿನ ನಗರ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಈ ಮೆಡಿಸಿಟಿಯಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕ್ಯಾಂಪಸ್, ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ, ಸುಧಾರಿತ ಸಂಶೋಧನಾ ಕೇಂದ್ರಗಳು, ಸಿಮ್ಯುಲೇಶನ್ ಹಾಗೂ ಸ್ಕಿಲ್ ಸೆಂಟರ್ ಗಳು, ಪ್ರಯೋಗಾಲಯಗಳು, ಔಷಧಾಲಯಗಳು, ಕ್ಷೇಮ ಕೇಂದ್ರಗಳು ಮತ್ತು ಆತಿಥ್ಯ ಸೌಲಭ್ಯಗಳು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ನೈಜ ಕ್ಲಿನಿಕಲ್ ವಾತಾವರಣದಲ್ಲಿ ತರಬೇತಿ ಸಿಗುವಂತೆ ಹಾಗೂ ರೋಗಿಗಳಿಗೆ ಸಂಶೋಧನೆ ಆಧಾರಿತ ಚಿಕಿತ್ಸೆ ದೊರಕುವಂತೆ ಮೂಲಸೌಕರ್ಯ ರೂಪಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, “ಇದು ಕೇವಲ ವಿಸ್ತರಣೆ ಅಲ್ಲ; ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಒಂದಾಗಿ ಬೆಳೆಯಬೇಕೆಂಬ ನಂಬಿಕೆಯ ಪ್ರತಿಫಲ. ದುಬೈನ ದೂರದೃಷ್ಟಿಯೊಂದಿಗೆ ನಿರ್ಮಿತವಾದ ಈ ಸಮಗ್ರ ಶೈಕ್ಷಣಿಕ ವೈದ್ಯಕೀಯ ನಗರ ಭವಿಷ್ಯದ ವೃತ್ತಿಪರರನ್ನು ರೂಪಿಸುವ ಜೊತೆಗೆ ರೋಗಿಗಳ ಆರೈಕೆಯ ಗುಣಮಟ್ಟ ಹೆಚ್ಚಿಸಲಿದೆ” ಎಂದರು.
ಶೈಕ್ಷಣಿಕ ವಿಭಾಗದಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ದುಬೈ ಕ್ಯಾಂಪಸ್ ಕಾರ್ಯನಿರ್ವಹಿಸಲಿದ್ದು, ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಧ್ಯಯನ, ಸುಧಾರಿತ ಸಿಮ್ಯುಲೇಶನ್ ಲ್ಯಾಬ್‌ಗಳು, ಶಸ್ತ್ರಚಿಕಿತ್ಸಾ ಕೌಶಲ್ಯ ಕೇಂದ್ರಗಳು ಹಾಗೂ ಅಂತರರಾಷ್ಟ್ರೀಯ ಪ್ರಮಾಣಿತ ಪಠ್ಯಕ್ರಮಗಳನ್ನು ಒಳಗೊಂಡಿದೆ.
ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ವಾತಾವರಣ ಕಲ್ಪಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ” ಎಂದರು.
ಆರೋಗ್ಯ ರಕ್ಷಣಾ ವಿಭಾಗವು ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ ಸುತ್ತ ಕೇಂದ್ರೀಕೃತವಾಗಿದ್ದು, ಪ್ರಥಮ ಹಂತದಲ್ಲಿ ಡಯಾಲಿಸಿಸ್, ಹೃದ್ರೋಗ, ಮೂಳೆಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳು ಆರಂಭಗೊಳ್ಳಲಿವೆ. ಮುಂದಿನ ಹಂತಗಳಲ್ಲಿ ಬಹು–ವಿಶೇಷ ಶೈಕ್ಷಣಿಕ ಆಸ್ಪತ್ರೆಯಾಗಿ ವಿಸ್ತರಣೆಗೊಳ್ಳುವ ಯೋಜನೆ ಹೊಂದಿದೆ.
ದುಬೈ–ಶಾರ್ಜಾ ಗಡಿಭಾಗದ ಅಲ್ ಕುಸೈಸ್ ಪ್ರದೇಶದಲ್ಲಿರುವ ಈ ಮೆಡಿಸಿಟಿ, ಪ್ರಮುಖ ಪ್ರದೇಶಗಳಿಗೆ ಸುಲಭ ಸಂಪರ್ಕ ಮತ್ತು ಅಂತರರಾಷ್ಟ್ರೀಯ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.






