ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಜತೆ ತುಂಬೆ ಒಪ್ಪಂದ: ಯುಎಇಯಲ್ಲಿ ಲಾಂಗ್ವಿಟಿ ವೈದ್ಯಕೀಯ ಶಿಕ್ಷಣಕ್ಕೆ ಚಾಲನೆ

ಅಜ್ಮಾನ್: ಸ್ವಿಟ್ಝರ್‌ಲ್ಯಾಂಡ್ ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ (GCLS) ಜತೆ ತುಂಬೆ ಗ್ರೂಪ್ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ (UAE) ಲಾಂಗ್ವಿಟಿ ವೈದ್ಯಕೀಯ, ಆರೋಗ್ಯಕರ ವಯಸ್ಸಾಗುವಿಕೆ, ತಡೆಗಟ್ಟುವ ಆರೋಗ್ಯ ಸೇವೆ ಮತ್ತು ನಿಖರ ಆರೋಗ್ಯ (ಪ್ರಿಸಿಷನ್ ಹೆಲ್ತ್) ಕ್ಷೇತ್ರಗಳಲ್ಲಿ ರಚನಾತ್ಮಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ಮುಂದಾಗಿದೆ.
ಈ ಒಪ್ಪಂದದಡಿ ಹೊಸದಾಗಿ ಸ್ಥಾಪನೆಯಾಗಿರುವ ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವಿಟಿ ಮೆಡಿಸಿನ್ ಮೂಲಕ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ(GMU) ಈ ಕಾರ್ಯಕ್ರಮಗಳನ್ನು ನಡೆಸಲಿದ್ದು, ಯುಎಇಯಲ್ಲಿ ಲಾಂಗ್ವಿಟಿ ವೈದ್ಯಕೀಯ ಕ್ಷೇತ್ರದಲ್ಲಿ ರಚನಾತ್ಮಕ ಶೈಕ್ಷಣಿಕ ಶಿಕ್ಷಣವನ್ನು ಪರಿಚಯಿಸಿದ ಮೊದಲ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾಗಲಿದೆ.
ಈ ಸಹಭಾಗಿತ್ವವು ಲಾಂಗ್ವಿಟಿ ವಿಜ್ಞಾನಕ್ಕೆ ಮೀಸಲಾಗಿರುವ ವಿಶ್ವದ ಮೊದಲ ಉನ್ನತ ಶಿಕ್ಷಣ ಸಂಸ್ಥೆಯಾದ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನ ಶೈಕ್ಷಣಿಕ ಪರಿಣತಿ ಹಾಗೂ ತುಂಬೆ ಹೆಲ್ತ್‌ಕೇರ್‌ನ ವ್ಯಾಪಕ ಕ್ಲಿನಿಕಲ್ ಜಾಲವನ್ನು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಾಮರ್ಥ್ಯದೊಂದಿಗೆ ಒಗ್ಗೂಡಿಸಲಿದೆ. ಮಧ್ಯಪ್ರಾಚ್ಯದಲ್ಲಿ ಲಾಂಗ್ವಿಟಿ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ವೃತ್ತಿಪರ ಅಭಿವೃದ್ಧಿಗೆ ಇದರಿಂದ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
ಈ ಕಾರ್ಯತಂತ್ರದ ಸಹಯೋಗವು ಯುಎಇ ಹಾಗೂ GCC ರಾಷ್ಟ್ರಗಳನ್ನು ಲಾಂಗ್ವಿಟಿ ವೈದ್ಯಕೀಯ ಕ್ಷೇತ್ರದಲ್ಲಿ ಉದಯೋನ್ಮುಖ ಕೇಂದ್ರಗಳಾಗಿ ರೂಪಿಸುವ ಜತೆಗೆ, ಆರೋಗ್ಯ ರಕ್ಷಣೆ, ತಡೆಗಟ್ಟುವ ವೈದ್ಯಕೀಯ ಮತ್ತು ವೈದ್ಯಕೀಯ ಅವಿಷ್ಕಾರದ ಜಾಗತಿಕ ಕೇಂದ್ರವಾಗುವ ಯುಎಇಯ ದೃಷ್ಟಿಕೋನಕ್ಕೂ ಬಲ ತುಂಬಲಿದೆ.
ಒಪ್ಪಂದದ ಭಾಗವಾಗಿ ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವಿಟಿ ಮೆಡಿಸಿನ್, ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನ ಶೈಕ್ಷಣಿಕ ಸಹಭಾಗಿತ್ವದಲ್ಲಿ ಆರು ಅಂತರರಾಷ್ಟ್ರೀಯ ವೃತ್ತಿಪರ ಪ್ರಮಾಣಪತ್ರ ಕೋರ್ಸ್ ಗಳನ್ನು ಆರಂಭಿ ಸಲಿದೆ. ಮೂರು ತಿಂಗಳ ಅವಧಿಯ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಪ್ರತಿಯೊಂದು ಕೋರ್ಸ್ ಗೂ ಆರಂಭಿಕ ಹಂತದಲ್ಲಿ ಸುಮಾರು 100 ಮಂದಿಗೆ ಪ್ರವೇಶ ನೀಡಲಾಗುತ್ತದೆ.
ಆರು ವೃತ್ತಿಪರ ಸರ್ಟಿಫಿಕೇಟ್ ಕೋರ್ಸ್ ಗಳು ಹೀಗಿವೆ:-
► ಕ್ಲಿನಿಕಲ್ ಲಾಂಗ್ವಿಟಿ ಮೆಡಿಸಿನ್ ನಲ್ಲಿ ತುಂಬೆ ಪ್ರೊಫೆಶನಲ್ ಸರ್ಟಿಫಿಕೇಟ್.
► ಲಾಂಗ್ವಿಟಿ ಫಿಸಿಯೋಥೆರಪಿಯಲ್ಲಿ ತುಂಬೆ ಪ್ರೊಫೆಶನಲ್ ಸರ್ಟಿಫಿಕೇಟ್.
► ಲಾಂಗ್ವಿಟಿ ಪೋಷಣದಲ್ಲಿ ತುಂಬೆ ಪ್ರೊಫೆಶನಲ್ ಸರ್ಟಿಫಿಕೇಟ್.
► ಲಾಂಗ್ವಿಟಿ ಫಿಟ್‌ನೆಸ್‌ನಲ್ಲಿ ತುಂಬೆ ಪ್ರೊಫೆಶನಲ್ ಸರ್ಟಿಫಿಕೇಟ್.
► ಪೆಪ್ಟೈಡ್ ಮೆಡಿಸಿನ್‌ನಲ್ಲಿ ತುಂಬೆ ಪ್ರೊಫೆಶನಲ್ ಸರ್ಟಿಫಿಕೇಟ್.
► ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಷಯದಲ್ಲಿ ತುಂಬೆ ಪ್ರೊಫೆಶನಲ್ ಸರ್ಟಿಫಿಕೇಟ್.
ವೈದ್ಯರು, ಫಾರ್ಮಸಿಸ್ಟ್, ದಾದಿಯರು, ಭೌತಚಿಕಿತ್ಸಕರು, ಪೌಷ್ಟಿಕ ತಜ್ಞರು, ಫಿಟ್‌ನೆಸ್ ವೃತ್ತಿಪರರು ಹಾಗೂ ಇತರ ಆರೋಗ್ಯ ಕ್ಷೇತ್ರದ ಪರಿಣಿತರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ರೂಪಿಸಿರುವ ಅಂತರರಾಷ್ಟ್ರೀಯ ಗುಣಮಟ್ಟದ ಪಠ್ಯಕ್ರಮವನ್ನು ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಮರ್ಥ್ಯ, ಕ್ಲಿನಿಕಲ್ ಅಧ್ಯಾಪಕರು, ಸಿಮ್ಯುಲೇಶನ್ ಸೌಲಭ್ಯಗಳು ಹಾಗೂ ಸಂಯೋಜಿತ ಆರೋಗ್ಯ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ.
ಭಾಗವಹಿಸುವವರಿಗೆ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ರೂಪಿಸಿರುವ ಅಂತರರಾಷ್ಟ್ರೀಯ ಗುಣಮಟ್ಟದ ಪಠ್ಯಕ್ರಮದಡಿ ತರಬೇತಿ ದೊರೆಯಲಿದೆ. ಭೇಟಿ ನೀಡುವ ಅಂತರರಾಷ್ಟ್ರೀಯ ಅಧ್ಯಾಪಕರು ಹಾಗೂ ಪ್ರಾದೇಶಿಕ ಕ್ಲಿನಿಕಲ್ ತಜ್ಞರು ತರಬೇತಿ ನೀಡಲಿದ್ದು, ಲಾಂಗ್ವಿಟಿ ವಿಜ್ಞಾನದಲ್ಲಿ ಉನ್ನತ ಅಧ್ಯಯನಕ್ಕೆ ಸ್ಪಷ್ಟ ಶೈಕ್ಷಣಿಕ ಪ್ರಗತಿ ಮಾರ್ಗಗಳನ್ನೂ ಕಲ್ಪಿಸಲಾಗಿದೆ.
2026ರಲ್ಲಿ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ನಡೆಸಿದ ಜಾಗತಿಕ ಲಾಂಗ್ವಿಟಿ ವೈದ್ಯರ ಸಮೀಕ್ಷೆಯಲ್ಲಿ ಆರು ಖಂಡಗಳ ವೈದ್ಯರು ಭಾಗವಹಿಸಿದ್ದರು. ಸಮೀಕ್ಷೆಯ ಪ್ರಕಾರ, ಶೇ.99ರಷ್ಟು ವೈದ್ಯರು ಲಾಂಗ್ವಿಟಿ ವೈದ್ಯಕೀಯ ಸೇವೆಗಳಿಗಾಗಿ ರೋಗಿಗಳ ಬೇಡಿಕೆ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ. ಶೇ.44ರಷ್ಟು ಮಂದಿ ಕಳೆದ ಮೂರು ವರ್ಷ ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳವಣಿಗೆ ದಾಖಲಾಗಿದೆ ಎಂದು ಹೇಳಿದ್ದಾರೆ. ಶೇ.83ರಷ್ಟು ಮಂದಿ ಆರೋಗ್ಯ ಸೇವೆ ಗಳು ತಡೆಗಟ್ಟುವ ವೈದ್ಯಕೀಯದತ್ತ ನಿರ್ಣಾಯಕವಾಗಿ ಸಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದು, ಶೇ.76ರಷ್ಟು ಮಂದಿ ಮುಂದಿನ 20 ವರ್ಷಗಳಲ್ಲಿ ಮಾನವರ ಜೀವಿತಾವಧಿಯಲ್ಲಿ ಗಮನಾರ್ಹ ಹೆಚ್ಚಳ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಿದ್ದಾರೆ.
ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, "ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನೊಂದಿಗೆ ಕೈಜೋಡಿಸುವ ಮೂಲಕ ಯುಎಇಗೆ ವಿಶ್ವದರ್ಜೆಯ ಸ್ವಿಸ್ ಶೈಕ್ಷಣಿಕ ಮಾನದಂಡಗಳನ್ನು ತರುತ್ತಿದ್ದೇವೆ. ಗಲ್ಫ್ ನಾದ್ಯಂತ ಆರೋಗ್ಯ ವೃತ್ತಿಪರರಿಗೆ ಈ ಹೊಸ ಕ್ಷೇತ್ರದಲ್ಲಿ ಅಗತ್ಯವಿರುವ ತರಬೇತಿ ನೀಡಲಾಗುವುದು. ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯನ್ನು ಗಲ್ಫ್ ನ ಅಗ್ರ ಖಾಸಗಿ ಮೆಡಿಕಲ್ ಯುನಿವರ್ಸಿಟಿಗಳಲ್ಲಿ ವಿಶ್ವದ ಪ್ರಮುಖ ವೈದ್ಯಕೀಯ ಸಂಸ್ಥೆಯನ್ನಾಗಿ ರೂಪಿಸುವುದು ನಮ್ಮ ಗುರಿ" ಎಂದು ತಿಳಿಸಿದ್ದಾರೆ.
ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಅಧ್ಯಕ್ಷ ಡಾ. ಡೊಮಿನಿಕ್ ಥಾರ್, "ಲಾಂಗ್ವಿಟಿ ವೈದ್ಯಕೀಯವು ಆಧುನಿಕ ಆರೋಗ್ಯ ಸೇವೆಯ ಪ್ರಮುಖ ಅಂಗವಾಗುತ್ತಿದೆ. ಆದರೆ ಈ ಕ್ಷೇತ್ರಕ್ಕೆ ಗುಣಮಟ್ಟದ ಶಿಕ್ಷಣ, ಕ್ಲಿನಿಕಲ್ ಮಾನದಂಡ ಗಳು ಹಾಗೂ ವಿಶ್ವಾಸಾರ್ಹ ತರಬೇತಿ ವ್ಯವಸ್ಥೆ ಅಗತ್ಯವಾಗಿದೆ. ಪ್ರಮುಖ ಯುನಿವರ್ಸಿಟಿಗಳೊಂದಿಗೆ ಪಾಲುದಾರಿಕೆ ಗಳ ಮೂಲಕ ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಅಡಿಪಾಯವನ್ನು ನಿರ್ಮಿಸುತ್ತಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಈ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಸೂಕ್ತ ಪಾಲುದಾರ" ಎಂದು ಹೇಳಿದ್ದಾರೆ.
ತಿಳುವಳಿಕೆ ಒಪ್ಪಂದದಡಿ ಆರಂಭದಲ್ಲಿ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಬಳಿಕ ಸಹ-ಬ್ರಾಂಡ್ ಸಮ್ಮೇಳನಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಹಾಗೂ ಇತರ ಜಂಟಿ ಕಾರ್ಯಕ್ರಮಗಳಿಗೆ ವಿಸ್ತರಿಸುವ ಅವಕಾಶವಿದೆ. ಎಲ್ಲಾ ಕೋರ್ಸ್ ಗಳನ್ನು ಸಂಬಂಧಿತ ಆರೋಗ್ಯ ಪ್ರಾಧಿಕಾರಗಳ ನಿಯಮಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ.
2026ರ ಸೆಪ್ಟೆಂಬರ್–ಅಕ್ಟೋಬರ್ ಪ್ರವೇಶಕ್ಕೆ ಮೊದಲ ಬ್ಯಾಚ್‌ಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 2026–27ನೇ ಶೈಕ್ಷಣಿಕ ವರ್ಷದ ಮೊದಲ ಬ್ಯಾಚ್‌ಗೆ ಈಗಾಗಲೇ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರವೇಶಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ವೆಬ್‌ಸೈಟ್‌ನಲ್ಲಿ ಪಡೆಯಬಹುದು.






