75 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ಚಿಕಿತ್ಸೆ: ದುಬೈನಲ್ಲಿ ಮತ್ತಷ್ಟು ವಿಸ್ತರಣೆಗೆ ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಸ್ಥೆಟಿಕ್ಸ್ ಸಜ್ಜು
ಹೊಸ ತಲೆಮಾರಿನ ಲೇಸರ್ ತಂತ್ರಜ್ಞಾನ, ಐಷಾರಾಮಿ ತ್ವಚೆ ಆರೈಕೆ ಉತ್ಪನ್ನಗಳ ಬಿಡುಗಡೆ

ಅಜ್ಮಾನ್: ಸೌಂದರ್ಯ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿರುವ ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಸ್ಥೆಟಿಕ್ಸ್ (TIA) ಇದೀಗ ಸೇವಾ ವಿಸ್ತರಣೆಯ ಹೊಸ ಹಂತಕ್ಕೆ ಸಜ್ಜಾಗಿದೆ.
ಹೊಸ ತಲೆಮಾರಿನ ಲೇಸರ್ ತಂತ್ರಜ್ಞಾನ, ಸುಧಾರಿತ ಸೌಂದರ್ಯ ಚಿಕಿತ್ಸೆಗಳು ಮತ್ತು ಐಷಾರಾಮಿ ತ್ವಚೆ ಆರೈಕೆ ಉತ್ಪನ್ನಗಳನ್ನು ಪರಿಚಯಿಸಿರುವ ಸಂಸ್ಥೆ, ಮುಂದಿನ ದಿನಗಳಲ್ಲಿ ದುಬೈನಲ್ಲಿಯೂ ತನ್ನ ಸೇವೆಗಳನ್ನು ವಿಸ್ತರಿಸಲು ಯೋಜಿಸಿದೆ.
ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವಿಸ್ತರಣಾ ಯೋಜನೆಗಳನ್ನು ಅನಾವರಣಗೊಳಿಸಲಾಯಿತು. 'ಶೇಪಿಂಗ್ ದಿ ಫ್ಯೂಚರ್ ಆಫ್ ಎಸ್ಥೆಟಿಕ್ಸ್ ಆ್ಯಂಡ್ ಪ್ಲಾಸ್ಟಿಕ್ ಸರ್ಜರಿ' ಎಂಬ ವಿಷಯದಡಿ ನಡೆದ ಕಾರ್ಯಕ್ರಮದಲ್ಲಿ ಫೆಡರಲ್ ನ್ಯಾಷನಲ್ ಕೌನ್ಸಿಲ್ ಸದಸ್ಯೆ ಆಯಿಷಾ ಇಬ್ರಾಹಿಂ ಅಲ್ ಮರ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಆಯಿಷಾ ಇಬ್ರಾಹಿಂ ಅಲ್ ಮರ್ರಿ ಅವರು TIA ಸಂಸ್ಥೆಯ ಎರಡು ಹೊಸ ಉತ್ಪನ್ನ ಮತ್ತು ಸೇವೆಗಳನ್ನು ಪರಿಚಯಿಸಿದರು. ಅವುಗಳಲ್ಲಿ ಸುಧಾರಿತ ಲೇಸರ್ ಹಾಗೂ ಸೌಂದರ್ಯ ಚಿಕಿತ್ಸಾ ತಂತ್ರಜ್ಞಾನಗಳು ಮತ್ತು ಸಂಸ್ಥೆಯೇ ತಯಾರಿಸಿದ 'TIA ಐಷಾರಾಮಿ ಸ್ಕಿನ್ ಕಲೆಕ್ಷನ್' ಹೆಸರಿನ ತ್ವಚೆ ಆರೈಕೆ ಉತ್ಪನ್ನಗಳು ಸೇರಿವೆ.
►21 ವೃತ್ತಿಪರರಿಗೆ ಸನ್ಮಾನ
7.5 ಸಿಎಂಇ ಗಂಟೆಗಳ ಮಾನ್ಯತೆ ಪಡೆದ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಯುಎಇ ಸೇರಿದಂತೆ ವಿದೇಶಗಳ ಪ್ಲಾಸ್ಟಿಕ್ ಸರ್ಜನ್ ಗಳು, ಚರ್ಮರೋಗ ತಜ್ಞರು ಮತ್ತು ಸೌಂದರ್ಯ ಚಿಕಿತ್ಸಾ ಪರಿಣತರು ಪಾಲ್ಗೊಂಡಿದ್ದರು. ವಯಸ್ಸಾಗುವಾಗ ಮುಖದ ಬದಲಾವಣೆಗಳು, ಮುಖದ ಅಂಗರಚನಾಶಾಸ್ತ್ರ, ಫಿಲ್ಲರ್ ಗಳು, ಬೊಟುಲಿನಮ್ ಟಾಕ್ಸಿನ್, ಜೆ-ಪ್ಲಾಸ್ಮಾ, ಪೆಪ್ಟೈಡ್ ಗಳು ಮತ್ತು ಲೇಸರ್ ಚಿಕಿತ್ಸೆ ಸೇರಿದಂತೆ ಸೌಂದರ್ಯ ಚಿಕಿತ್ಸಾ ಕ್ಷೇತ್ರದ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸೌಂದರ್ಯ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ 21 ವೃತ್ತಿಪರರನ್ನು ಸನ್ಮಾನಿಸಲಾಯಿತು.
►75 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ಸೇವೆ
2024ರ ಕೊನೆಯಲ್ಲಿ ಆರಂಭವಾದ ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಸ್ಥೆಟಿಕ್ಸ್ ಈವರೆಗೆ 75,000ಕ್ಕೂ ಹೆಚ್ಚು ಗ್ರಾಹಕರಿಗೆ ಚಿಕಿತ್ಸೆ ನೀಡಿದೆ. ಈ ವರ್ಷ ಫುಜೈರಾದ ತುಂಬೆ ಆಸ್ಪತ್ರೆಗೂ ತನ್ನ ಸೇವೆಗಳನ್ನು ವಿಸ್ತರಿಸಿದೆ. ಇದರೊಂದಿಗೆ TIA ವೆಲ್ನೆಸ್ ಆ್ಯಂಡ್ ಬ್ಯೂಟಿ ಸ್ಟೋರ್ ಆರಂಭಿಸಿದ್ದು, 'ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ನೂರಿಶ್' ಹೆಸರಿನ ಕ್ಷೇಮ ಮತ್ತು ಆರೋಗ್ಯ ಕಾಳಜಿಯ ಕೆಫೆಯನ್ನೂ ಪರಿಚಯಿಸಿದೆ.
ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸಹಯೋಗದಲ್ಲಿ ಸೌಂದರ್ಯ ಚಿಕಿತ್ಸಾ ಕ್ಷೇತ್ರದ ವೃತ್ತಿಪರರ ಕೌಶಲ ವೃದ್ಧಿಗಾಗಿ 20ಕ್ಕೂ ಹೆಚ್ಚು ಪ್ರಮಾಣೀಕರಣ ಕಾರ್ಯಕ್ರಮಗಳನ್ನೂ ಸಂಸ್ಥೆ ನಡೆಸುತ್ತಿದೆ.
►ದುಬೈನಲ್ಲಿ ಹೊಸ ಚಿಕಿತ್ಸಾಲಯಗಳ ಯೋಜನೆ
TIA ತನ್ನ ಸೇವೆಗಳನ್ನು ದುಬೈಗೂ ವಿಸ್ತರಿಸಲು ಯೋಜಿಸಿದೆ. ದುಬೈನಲ್ಲಿ ನಿರ್ಮಾಣವಾಗುತ್ತಿರುವ ತುಂಬೆ ಮೆಡಿಸಿಟಿಯಲ್ಲಿ ಮೂರು ಹೊಸ ಕೇಂದ್ರಗಳನ್ನು ಆರಂಭಿಸಲಿದೆ. ಇವುಗಳಲ್ಲಿ 'ದೀರ್ಘಕಾಲ ಆರೋಗ್ಯ ಕಾಪಾಡುವ ಚಿಕಿತ್ಸಾ ಕೇಂದ್ರ' ಮತ್ತು ಕೂದಲು ಪುನಃಸ್ಥಾಪನಾ ಚಿಕಿತ್ಸಾಲಯವೂ ಸೇರಿವೆ. 'ದೀರ್ಘಕಾಲ ಆರೋಗ್ಯ ಕಾಪಾಡುವ ಚಿಕಿತ್ಸಾ ಕೇಂದ್ರ' ದಲ್ಲಿ ಪುನರುತ್ಪಾದಕ ವೈದ್ಯಕೀಯ ಚಿಕಿತ್ಸೆಗಳು ಮತ್ತು ಐವಿ (ರಕ್ತನಾಳದ ಮೂಲಕ ಔಷಧ ಅಥವಾ ದ್ರವ ನೀಡುವ) ಚಿಕಿತ್ಸೆಗಳನ್ನು ನೀಡಲಾಗುತ್ತದೆ.
"ವಿಶ್ವವಿದ್ಯಾಲಯ ಆಸ್ಪತ್ರೆಯಿಂದ ದೊರೆಯುವ ಆರೈಕೆಯ ಮೇಲಿನ ವಿಶ್ವಾಸದಿಂದ ರೋಗಿಗಳು TIAಗೆ ಬರುತ್ತಾರೆ. ದೀರ್ಘಕಾಲ ಆರೋಗ್ಯ ಕಾಪಾಡುವ ಚಿಕಿತ್ಸಾ ಕೇಂದ್ರ, ಕೂದಲು ಪುನಃಸ್ಥಾಪನೆ ಮತ್ತು ದುಬೈನಲ್ಲಿ ವಿಸ್ತರಣೆ ನಮ್ಮ ಮುಂದಿನ ಹಂತಗಳಾಗಿವೆ" ಎಂದು ತುಂಬೆ ಗ್ರೂಪ್ ನ ಆರೋಗ್ಯ ಸೇವೆಗಳ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ ತಿಳಿಸಿದ್ದಾರೆ.
ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಸ್ಥೆಟಿಕ್ಸ್, ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿರುವ ತುಂಬೆ ವಿಶ್ವವಿದ್ಯಾಲಯ ಆಸ್ಪತ್ರೆಯ ಭಾಗವಾಗಿದೆ. ಇದು ತುಂಬೆ ಗ್ರೂಪ್ ನ ಆರೋಗ್ಯ ಸೇವೆಗಳ ವಿಭಾಗವಾದ ತುಂಬೆ ಹೆಲ್ತ್ಕೇರ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ಸರ್ಜರಿ, ಚರ್ಮರೋಗ ಶಾಸ್ತ್ರ, ಲೇಸರ್ ಮತ್ತು ಸೌಂದರ್ಯ ಚಿಕಿತ್ಸೆಗಳನ್ನು ಒದಗಿಸುವುದರ ಜೊತೆಗೆ ವೃತ್ತಿಪರ ತರಬೇತಿ ಯನ್ನೂ ನೀಡುತ್ತದೆ ಎಂದು ಪ್ರಕಟನೆ ತಿಳಿಸಿದೆ.






