ಯುಎಇ| ಚೇತನ್ ರಾಜ್ ಮೃತದೇಹವನ್ನು ತ್ವರಿತವಾಗಿ ತಾಯ್ನಾಡಿಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದ 'ದುಬೈ ಬ್ಯಾರೀಸ್', 'ಕೆಸಿಎಫ್ ಯುಎಇ'

ಅಬುಧಾಬಿ: ಅಬುಧಾಬಿಯಲ್ಲಿ ಎ.20ರಂದು ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಮಂಗಳೂರು ಮೂಲದ ಚೇತನ್ ರಾಜ್ ಅವರ ಮೃತದೇಹವನ್ನು ತ್ವರಿತವಾಗಿ ತಾಯ್ನಾಡಿಗೆ ಕಳುಹಿಸಲು ಸಹಕರಿಸುವ ಮೂಲಕ 'ದುಬೈ ಬ್ಯಾರೀಸ್' ಹಾಗು 'ಕೆಸಿಎಫ್ ಯುಎಇ' ತಂಡ ಮಾನವೀಯತೆ ಮೆರೆದಿದೆ.
ಅಪಘಾತ ನಡೆದ ವೇಳೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್ (BCCI) ಯುಎಇ ಘಟಕದ ಅಧ್ಯಕ್ಷ ಹಾಗು 'ದುಬೈ ಬ್ಯಾರೀಸ್'ನ ಪ್ರಮುಖರಾಗಿರುವ ಹಿದಾಯತ್ ಅಡ್ಡೂರು ಅವರ ಗಮನಕ್ಕೆ ತರಲಾಗಿದ್ದು, ಈ ವೇಳೆ ಹಿದಾಯತ್ ಅಡ್ಡೂರು ಹಾಗು ಸಮಾಜ ಸೇವಕ ಸಮದ್ ಬಿರಾಲಿ ಅವರು ಅಬುಧಾಬಿಯ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF UAE) ಸದಸ್ಯರಿಗೆ ಮಾಹಿತಿ ನೀಡಿದರು.
ಮಾಹಿತಿ ಸಿಕ್ಕ ಕೂಡಲೇ ಕೆಸಿಎಫ್ ಯುಎಇಯ ಸಾಮಾಜಿಕ ಕಾರ್ಯಕರ್ತರಾದ ಮುಹಮ್ಮದ್ ಕುಂಞಿ ಈಶ್ವರಮಂಗಿಲ, ಹಕೀಮ್ ತೂರ್ಕಳಿಕೆ ಹಾಗು ಕಬೀರ್ ತಕ್ಷಣ ಮೃತರ ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ಸಹಾಯ ಕಾರ್ಯ ಆರಂಭಿಸಿದರು. ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲು 'ದುಬೈ ಬ್ಯಾರೀಸ್' ಹಾಗು 'ಕೆಸಿಎಫ್ ಯುಎಇ' ತಂಡ ಕಾರ್ಯಪ್ರವೃತ್ತರಾದರು.
ಹಿದಾಯತ್ ಅಡ್ಡೂರು, ಸಮದ್ ಬಿರಾಲಿ, ಮುಹಮ್ಮದ್ ಕುಂಞಿ ಈಶ್ವರಮಂಗಿಲ, ಹಕೀಮ್ ತೂರ್ಕಳಿಕೆ, ಕಬೀರ್, ಸಂಶುದ್ದೀನ್ ಪಿಲಿಗೂಡು ಮತ್ತಿತರರು ಸೇರಿಕೊಂಡು ಮೃತದೇಹವನ್ನು ತ್ವರಿತವಾಗಿ ತಾಯ್ನಾಡಿಗೆ ಕಳುಹಿಸಲು ಬೇಕಾದ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಅದನ್ನು ಪೊಲೀಸ್ ಹಾಗು ಸಂಬಂಧಿತ ಅಧಿಕಾರಿಗಳಿಗೆ ನೀಡಿ, ಮೃತದೇಹವನ್ನು ಕಳುಹಿಸುವಲ್ಲಿ ಯಶಸ್ವಿಯಾದರು.
'ದುಬೈ ಬ್ಯಾರೀಸ್' ಹಾಗು 'ಕೆಸಿಎಫ್ ಯುಎಇ' ತಂಡ ಮೃತರ ಕುಟುಂಬದವರ ಜೊತೆಗೂಡಿ ಎಲ್ಲ ರೀತಿಯ ನೆರವು, ಕುಟುಂಬದವರಿಗೆ ಮಾನಸಿಕ ಬೆಂಬಲ ನೀಡಿ ಸಹಕರಿಸುವ ಮೂಲಕ ಮಾನವೀಯತೆ ಮೆರೆದಿದೆ.
'ದುಬೈ ಬ್ಯಾರೀಸ್' ಹಾಗು 'ಕೆಸಿಎಫ್ ಯುಎಇ' ತಂಡದವರು ನೀಡಿದ ಈ ಮಾನವೀಯ ಸ್ಪಂದನೆಗೆ ಯುಎಇಯಾದ್ಯಂತ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






