ನಾವೆಲ್ಲ ಸುರಕ್ಷಿತರಾಗಿದ್ದೇವೆ; ಗಾಳಿ ಸುದ್ದಿಗೆ ಕಿವಿಗೊಡಬೇಡಿ: ಯುಎಇಯಲ್ಲಿರುವ ಕನ್ನಡಿಗರ ಮನವಿ

ದುಬೈ, ಮಾ.1: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದಾಳಿಗೆ ಸಂಬಂಧಿಸಿದ ಸುದ್ದಿ, ವೀಡಿಯೊಗಳಿಂದಾಗಿ ಜನ ಇನ್ನಷ್ಟು ಭಯಭೀತರಾಗಿದ್ದಾರೆ.
ಯುಎಇಯಲ್ಲಿ ದಾಳಿಯ ಭೀತಿ ಇದ್ದರೂ ಜನಜೀವನ ಎಂದಿನಂತಿದೆ. ಜನ ಸುರಕ್ಷಿತರಾಗಿದ್ದು, ಅಂಗಡಿ, ಮುಂಗಟ್ಟುಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಇಲ್ಲಿನ ಪ್ರಸಕ್ತ ಪರಿಸ್ಥಿತಿ ಬಗ್ಗೆ ಯುಎಇಯಲ್ಲಿ ಕಾರ್ಯಾಚರಿಸುತ್ತಿರುವ ಕನ್ನಡಪರ ಸಂಘಟನೆಗಳ ಹಾಗು ವಿವಿಧ ಕರ್ನಾಟಕ ಮೂಲದ ಸಂಘಟನೆಗಳ ಮುಖಂಡರು ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ.
ನಾವು ಸುರಕ್ಷಿತರಾಗಿದ್ದೇವೆ
"ಯುಎಇಯಲ್ಲಿ ಪ್ರಸಕ್ತ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಇಲ್ಲಿನ ಸರಕಾರ ಜನರೊಂದಿಗಿದೆ. ಕರ್ನಾಟಕದಿಂದ ದುಬೈಗೆ ಬಂದಿರುವ ಕೆಲವು ಪ್ರವಾಸಿಗರು ಅತಂತ್ರ ಸ್ಥಿತಿಯಲ್ಲಿದ್ದು, ಅವರನ್ನು ನಾವು ಭೇಟಿ ಮಾಡಿ ಎಲ್ಲ ರೀತಿಯ ಸಹಾಯ, ಸಹಕಾರದ ಭರವಸೆ ನೀಡಿದ್ದೇವೆ. ಇಲ್ಲಿ ಎಲ್ಲ ಭಾರತೀಯರು ಸುರಕ್ಷಿತರಾಗಿದ್ದಾರೆ. ಸರಕಾರ ನೀಡುತ್ತಿರುವ ಸೂಚನೆಗಳನ್ನು ಪಾಲಿಸಿ, ಯಾವುದೇ ಗಾಳಿಸುದ್ದಿಗಳನ್ನು ಹರಡಬೇಡಿ".
-ಹಿದಾಯತ್ ಅಡ್ಡೂರು, ಅಧ್ಯಕ್ಷರು, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ
ಸರಕಾರ ಎಲ್ಲ ರೀತಿಯ ಭದ್ರತೆ ನೀಡಿದೆ, ಆತಂಕ ಬೇಡ
"ಯುಎಇಯಲ್ಲಿನ ಸರಕಾರ ಎಲ್ಲ ರೀತಿಯ ಭದ್ರತೆ ನೀಡಿರುವುದರಿಂದ ಜನರು ಭಯ, ಆತಂಕ ಪಡುವ ಅಗತ್ಯವಿಲ್ಲ. ಕಳೆದ ಎರಡು ದಿನಗಳಿಂದ ಇಲ್ಲಿನ ಸಚಿವಾಲಯ ಜನರ ಸುರಕ್ಷತೆಯ ದೃಷ್ಟಿನಿಂದ ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತಲೇ ಇದೆ. ಸಾಮಾಜಿಕ ಜಾಲತಾಣಗಳ ಸುದ್ದಿಗಳನ್ನು ನಂಬಬೇಡಿ. ಸರಕಾರ ನೀಡುವ ಸುದ್ದಿ, ಸೂಚನೆಯನ್ನಷ್ಟೇ ಪಾಲಿಸಿ. ಕನ್ನಡಿಗರೊಂದಿಗೆ ಯುಎಇ ಸರಕಾರ, ಕರ್ನಾಟಕ ಸರಕಾರ ಹಾಗೂ ಕೆಎನ್‌ಆರ್‌ಐ ಫೋರಂ ಸದಾ ಇರುತ್ತದೆ.
ನಾವು ಹೋಟೆಲ್ ಉದ್ಯಮಿಯಾಗಿದ್ದು, ನಮ್ಮ ಹೋಟೆಲ್ ನಲ್ಲಿ ಇರುವವರಿಗೆ ಅವರ ಕಾಲಮಿತಿ ಮುಗಿದರೂ ಪ್ರಸಕ್ತ ಸನ್ನಿವೇಶದಿಂದಾಗಿ ಹೆಚ್ಚು ಕಾಲ ಹೋಟೆಲ್‌ನಲ್ಲೇ ವಾಸ್ತವ್ಯಕ್ಕೆ ಅನುವು ಮಾಡಿಕೊಡುವಂತೆ ಯುಎಇಯ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿದೆ. ಜೊತೆಗೆ ಇಲ್ಲಿನ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸುವಂತೆಯೋ ಸರಕಾರ ಆದೇಶ ಹೊರಡಿಸಿದೆ".
-ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಕೆಎನ್‌ಆರ್‌ಐ ಫೋರಂ
ಆತಂಕಿತರಾಗಬೇಡಿ
"ಯುಎಇಯಲ್ಲಿ ನಾವೆಲ್ಲಾ ಸುರಕ್ಷಿತರಾಗಿದ್ದೇವೆ. ಯಾರೂ ಆತಂಕಿತರಾಗಬೇಡಿ. ಎಲ್ಲ ಕಡೆ ಅಂಗಡಿ, ಶಾಪಿಂಗ್ ಮಾಲ್‌ಗಳು ತೆರೆದಿವೆ. ಜನರು ಎಂದಿನಂತೆ ತಿರುಗಾಡುತ್ತಿದ್ದಾರೆ. ಸರಕಾರ ಎಲ್ಲ ರೀತಿಯ ಮುಂಜಾಗೃತಾ ಕ್ರಮವನ್ನು ಕೈಗೊಂಡಿದೆ.
ದುಬೈಗೆ ಆಗಮಿಸಿರುವ ಸುಮಾರು 85 ಕನ್ನಡಿಗರು ದಾಳಿಯ ಹಿನ್ನೆಲೆಯಲ್ಲಿ ಸಿಕ್ಕಾಕಿಕೊಂಡಿದ್ದು, ಅವರನ್ನೆಲ್ಲ ಸುರಕ್ಷಿತವಾಗಿ ಹೋಟೆಲೊಂದರಲ್ಲಿ ಇರಿಸಲಾಗಿದೆ. ಅವರಿಗೆ ಆಹಾರ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆ ಆದರೂ ನಮ್ಮನ್ನು ಸಂಪರ್ಕಿಸಬಹುದು".
-ಶಶಿಧರ್ ನಾಗರಾಜಪ್ಪ, ಅಧ್ಯಕ್ಷರು, ಕರ್ನಾಟಕ ಸಂಘ, ದುಬೈ
ಪ್ರವಾಸ ಬಂದಿರುವ ಕನ್ನಡಿಗರಿಗೆ ಅಗತ್ಯ ನೆರವು
"ಸದ್ಯ ಕರ್ನಾಟಕದಿಂದ ದುಬೈಗೆ ಪ್ರವಾಸ ಬಂದಿರುವ ಹಲವಾರು ಕನ್ನಡಿಗರು ವಾಪಸ್ ಹೋಗಲು ಆಗದೆ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೆರೆಡು ದಿನದಲ್ಲಿ ಸುರಕ್ಷಿತರಾಗಿ ಅವರು ತಾಯ್ನಾಡು ಸೇರಲಿದ್ದಾರೆ. ಇಲ್ಲಿನ ಸರಕಾರ ಎಲ್ಲ ರೀತಿಯಲ್ಲೂ ಜನರ ಸುರಕ್ಷತೆಯನ್ನು ಕಾಪಾಡುತ್ತಿದೆ. ಎಲ್ಲ ರೀತಿಯ ಮುನ್ಸೂಚನೆ ನೀಡುವ ಜೊತೆಗೆ ಸಹಾಯವಾಣಿ ತೆರೆಯಲಾಗಿದೆ. ಈ ದೇಶದಲ್ಲಿ ಜನ ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದ್ದಾರೆ".
- ಅರುಣ್ ಕುಮಾರ್, ಅಧ್ಯಕ್ಷರು, ಕನ್ನಡ ಕೂಟ ದುಬೈ
ಸುಳ್ಳುಸುದ್ದಿಗಳನ್ನು ನಂಬಬೇಡಿ
"ಯುಎಇಯಲ್ಲಿ ಯುದ್ಧದ ವಾತಾವರಣ ಇದ್ದರೂ ಇಲ್ಲಿ ಜನ ಭಯ, ಆತಂಕಿತರಾಗಬೇಕಿಲ್ಲ. ಇಲ್ಲಿನ ಸರಕಾರ ಜನರ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಇಲ್ಲಿಯ ಬಗ್ಗೆ ಬರುತ್ತಿರುವ ಸುದ್ದಿಗಳು, ವೀಡಿಯೊಗಳನ್ನು ಯಾರೂ ನಂಬ ಬೇಡಿ. ಅವರು ತಮ್ಮ ಟಿಆರ್‌ಪಿ ಹೆಚ್ಚಿಸಲು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅಂತಹ ಘಟನೆಗಳು ಎಲ್ಲಿಯೂ ನಡೆದಿಲ್ಲ. ಇಲ್ಲಿ ಎಲ್ಲವೂ ಸಹಜವಾಗಿದೆ. ಜನರು ಸುರಕ್ಷಿತರಾಗಿದ್ದಾರೆ".
-ಎಂ.ಇ.ಮೂಳೂರು, ಉಪಾಧ್ಯಕ್ಷರು, ಬ್ಯಾರೀಸ್ ಕಲ್ಚರಲ್ ಫೋರಂ, ದುಬೈ
ನಾವೆಲ್ಲಾ ಸುರಕ್ಷಿತವಾಗಿದ್ದೇವೆ
"ಯುಎಇಯಲ್ಲಿರುವ ಎಲ್ಲ ಕನ್ನಡಿಗರು ಸುರಕ್ಷಿತರಾಗಿದ್ದಾರೆ. ಇಲ್ಲಿರುವ ಎಲ್ಲ ಅನಿವಾಸಿಗಳ ಸುರಕ್ಷತೆಗೆ ಯುಎಇ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಇಲ್ಲಿನ ಸರಕಾರ ಸೂಚನೆ ನೀಡಿದೆ. ಸರಕಾರಿ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಜೊತೆಗೆ ಯಾವುದೇ ರೀತಿಯ ಭಯ ಪಡುವ ಅಗತ್ಯತೆ ಇಲ್ಲ".
- ನಾಸಿರ್ ಕರಾಜೆ, ಕನ್ನಡಿಗ, ದುಬೈ






