ಹೃದಯಾಘಾತದಿಂದ ಮೃತ್ಯು: ಮಹಿಳೆಯ ಮೃತದೇಹ ದುಬೈಯಿಂದ ಮುಂಬೈಗೆ ರವಾನೆ

ದುಬೈ: ಕೆಲ ದಿನಗಳ ಹಿಂದೆ ದುಬೈಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಮುಂಬೈ ಮೂಲದ ಮಹಿಳೆ ಮರಿಯಾ ಪರ್ಪೆಕ್ಚುವಲ್ ಫುರ್ಟಾಡೋ ಎಂಬವರ ಮೃತದೇಹವನ್ನು ತ್ವರಿತವಾಗಿ ತಾಯ್ನಾಡಿಗೆ ಕಳುಹಿಸಲಾಯಿತು.
ಮರಿಯಾ ಪರ್ಪೆಕ್ಚುವಲ್ ಫುರ್ಟಾಡೋ ಅವರು ಮೃತಪಟ್ಟ ವೇಳೆ ಅವರ ಸಂಬಂಧಿ ಮಂಗಳೂರು ಮೂಲದ ನೆಲ್ಸನ್ ಎಂಬವರು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್ (BCCI) ಯುಎಇ ಘಟಕದ ಅಧ್ಯಕ್ಷ ಹಾಗು 'ದುಬೈ ಬ್ಯಾರೀಸ್'ನ ಪ್ರಮುಖರಾಗಿರುವ ಹಿದಾಯತ್ ಅಡ್ಡೂರು ಅವರನ್ನು ಸಂಪರ್ಕಿಸಿದ್ದು, ಮೃತದೇಹವನ್ನು ತಾಯ್ನಾಡಿಗೆ ಕೊಂಡೊಯ್ಯಲು ಬೇಕಾದ ನೆರವನ್ನು ಕೋರಿದ್ದು, ಈ ವೇಳೆ ಹಿದಾಯತ್ ಅವರು ಸಾಮಾಜಿಕ ಕಾರ್ಯಕರ್ತ ಸಮದ್ ಬಿರಾಲಿ ಅವರ ಗಮನಕ್ಕೆ ತಂದಿದ್ದಾರೆ.
ಬಳಿಕ ಸಮದ್ ಬಿರಾಲಿ ಅವರು ಮೃತದೇಹವನ್ನು ತ್ವರಿತವಾಗಿ ಮುಂಬೈಗೆ ಕೊಂಡೊಯ್ಯಲು ಬೇಕಾದ ಎಲ್ಲ ಕಾನೂನು ಪ್ರಕ್ರಿಯೆ, ಮರಣ ಪ್ರಮಾಣ ಪತ್ರ, ಕ್ಲಿಯರೆನ್ಸ್ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಎಲ್ಲ ರೀತಿಯ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಿ, ಮೃತದೇಹವನ್ನು ದುಬೈ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಮೃತದೇಹವನ್ನು ತ್ವರಿತವಾಗಿ ತಾಯ್ನಾಡಿಗೆ ರವಾನಿಸಲು ಸಹಕರಿಸಿದ ಸಮದ್ ಬಿರಾಲಿ ಅವರಿಗೆ ಮೃತರ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.






