ಜ್ಞಾನೇಶ್ ಕುಮಾರ್ ಪುತ್ರಿ ಮೇಧಾ ರೂಪಮ್ ಅರ್ಜಿ ನಿಗದಿತ ಸರದಿ ಮೀರಿ ಪಟ್ಟಿ: CJIಗೆ ವಕೀಲರ ಸಂಘದಿಂದ ಪತ್ರ
‘ರೋಸ್ಟರ್ ಮೀರಿ ನಿರ್ದಿಷ್ಟ ಪೀಠಕ್ಕೆ ವಹಿಸಲಾಗಿದೆ; ಕಲಾಪದ ನೇರ ಪ್ರಸಾರದ ವೇಳೆ ಶಬ್ದ ಸ್ಥಗಿತಗೊಳಿಸಲಾಗಿದೆ’ ಎಂದು ಆರೋಪ

CJI ಸೂರ್ಯ ಕಾಂತ್ - Photo : ANI
ಹೊಸದಿಲ್ಲಿ: ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಮೇಧಾ ರೂಪಮ್ ಅವರು ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನು ನಿಗದಿತ ಸರದಿ ಮೀರಿ (out-of-turn) ಪಟ್ಟಿ ಮಾಡಿರುವುದು ಮತ್ತು ವಿಚಾರಣೆಯ ನೇರ ಪ್ರಸಾರದ ವೇಳೆ ಶಬ್ದವನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ‘ಲಾಯರ್ಸ್ ಅಸೋಸಿಯೇಷನ್ ಫಾರ್ ಕಾನ್ಸ್ಟಿಟ್ಯೂಷನ್’ (LAFC) ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರಿಗೆ ಪತ್ರ ಬರೆದಿದೆ.
ಮೇಧಾ ರೂಪಮ್ ಅವರು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಪುತ್ರಿ. ಅಸ್ತಿತ್ವದಲ್ಲಿರುವ ರೋಸ್ಟರ್ (ಕಾರ್ಯ ಹಂಚಿಕೆ ಪಟ್ಟಿ) ನಿಯಮಗಳ ಪ್ರಕಾರ, ಪ್ರಕರಣವು ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್. ಕೋಟಿಸ್ವರ್ ಸಿಂಗ್ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬರಬೇಕಿರಲಿಲ್ಲ ಎಂದು LAFC ಹೇಳಿದೆ. ಆದರೂ ಪ್ರಕರಣವನ್ನು ಇದೇ ಪೀಠದ ಮುಂದೆ ವಿಶೇಷವಾಗಿ ಪಟ್ಟಿ ಮಾಡಲಾಗಿದೆ ಎಂದು ಸಂಘ ಆರೋಪಿಸಿದೆ.
ಸಾಮಾನ್ಯ ಸರದಿಯನ್ನು ಮೀರಿ ಪ್ರಕರಣವನ್ನು ಪಟ್ಟಿಗೆ ಸೇರಿಸಿರುವುದು ವಿಶೇಷ ಆದ್ಯತೆ ನೀಡಿದಂತೆ ಕಾಣುತ್ತದೆ. ಇಂತಹ ಕ್ರಮವು ತಪ್ಪು ಪೂರ್ವನಿದರ್ಶನಕ್ಕೆ ಕಾರಣವಾಗಬಹುದು ಎಂದು LAFC ತಿಳಿಸಿದೆ.
‘ಪ್ರಕರಣವನ್ನು ನಿರ್ದಿಷ್ಟ ಪೀಠದ ಮುಂದೆ ವಿಶೇಷವಾಗಿ ಪಟ್ಟಿ ಮಾಡಿರುವ ಕ್ರಮವು ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತಂದಿದೆ’ ಎಂದು ಸಂಘ ಪತ್ರದಲ್ಲಿ ಹೇಳಿದೆ.
ನೋಯ್ಡಾದಲ್ಲಿ ಕಾರ್ಮಿಕರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಆಕೃತಿ ಚೌಧರಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಬಂಧಿಸಲಾಗಿತ್ತು. ಈ ಬಂಧನಕ್ಕೆ ಸಂಬಂಧಿಸಿದ ನೋಯ್ಡಾ ಆಡಳಿತದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿತ್ತು.
ಚೌಧರಿ ಅವರಿಗೆ ಉತ್ತಮ ನಡವಳಿಕೆಗಾಗಿ ಬಾಂಡ್ (ಖಾತರಿ ಪತ್ರ) ಸಲ್ಲಿಸುವಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 130ರ ಅಡಿ ನೋಟಿಸ್ ನೀಡಲಾಗಿತ್ತು. ಆದರೆ, ಅವರನ್ನು ವಶಕ್ಕೆ ಪಡೆದ ಬಳಿಕವೇ ನೋಟಿಸ್ ಸಿದ್ಧಪಡಿಸಿದಂತೆ ಕಂಡುಬಂದಿದೆ ಎಂದು ಹೈಕೋರ್ಟ್ ಉಲ್ಲೇಖಿಸಿತ್ತು.
ನೋಟಿಸ್ ನಲ್ಲಿ ನಮೂದಿಸಿದ್ದ ಸಾಮಾನ್ಯ ಡೈರಿ ಸಂಖ್ಯೆಯನ್ನು ಪರಿಶೀಲಿಸಿದ ಹೈಕೋರ್ಟ್, ಬಂಧನದ ಬಳಿಕ ಅಧಿಕಾರಿಗಳು ದಾಖಲೆಗಳನ್ನು ಸಿದ್ಧಪಡಿಸಿರುವ ಸಾಧ್ಯತೆ ಇದೆ ಎಂದು ಹೇಳಿತ್ತು. ಬಂಧನವನ್ನು ಸಮರ್ಥಿಸಿಕೊಳ್ಳಲು ಬಳಿಕ ದಾಖಲೆ ಸೃಷ್ಟಿಸಿದಂತಿದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು. ದಾಖಲೆಗಳಲ್ಲಿ ಕಂಡುಬಂದ ಈ ವ್ಯತ್ಯಾಸಕ್ಕೆ ರಾಜ್ಯ ಸರ್ಕಾರ ಸೂಕ್ತ ವಿವರಣೆ ನೀಡಿಲ್ಲ ಎಂದೂ ನ್ಯಾಯಾಲಯ ಹೇಳಿತ್ತು.ಚೌಧರಿ ಅವರ ಬಂಧನವನ್ನು ರದ್ದುಗೊಳಿಸಿದ ಹೈಕೋರ್ಟ್, 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಮೊತ್ತವನ್ನು ನೋಯ್ಡಾ DM ಮೇಧಾ ರೂಪಮ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಸಿಬ್ಬಂದಿಯ ವೈಯಕ್ತಿಕ ವೇತನದಿಂದ ನೇರವಾಗಿ ವಸೂಲಿ ಮಾಡಬೇಕು ಎಂದು ಸೂಚಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಮೇಧಾ ರೂಪಮ್ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್ 5 ಲಕ್ಷ ರೂ. ಪರಿಹಾರ ವಸೂಲಿ ಮಾಡುವುದನ್ನು ತಡೆಹಿಡಿದಿತ್ತು.
‘ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವಿದ್ಯಾರ್ಥಿಯೊಬ್ಬರ ಬಂಧನಕ್ಕೆ ಸಂಬಂಧಿಸಿದಂತೆ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಹೊರಡಿಸಲಾದ ಟೀಕೆಗಳಿಗೆ (strictures) ಸಂಬಂಧಿಸಿದ ಪ್ರಕರಣಗಳನ್ನು ಇತ್ತೀಚೆಗೆ ಪಟ್ಟಿಗೆ ಸೇರಿಸಿರುವ ಕ್ರಮವು ಕಾನೂನು ವಲಯಗಳಲ್ಲಿ ಕಳವಳ ಉಂಟುಮಾಡಿದೆ’ ಎಂದು LAFC ಪತ್ರದಲ್ಲಿ ಹೇಳಿದೆ.
NSA ಅಡಿ ಬಂಧನಕ್ಕೆ ಸಂಬಂಧಿಸಿದ ಈ ಪ್ರಕರಣವು ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ರೋಸ್ಟರ್ ಪ್ರಕಾರ, ಪಟ್ಟಿ ಮಾಡಲಾಗಿರುವ ನಿರ್ದಿಷ್ಟ ಪೀಠದ ಮುಂದೆ ವಿಚಾರಣೆಗೆ ಬರಬೇಕಿರಲಿಲ್ಲ ಎಂದು ಸಂಘ ಹೇಳಿದೆ. ಆದರೂ ಪ್ರಕರಣವನ್ನು ನಿರ್ದಿಷ್ಟ ಪೀಠಕ್ಕೆ ವಿಶೇಷವಾಗಿ ವಹಿಸಲಾಗಿದೆ ಎಂದು ತೋರುತ್ತಿದೆ ಎಂದು ಆರೋಪಿಸಿದೆ.
ನ್ಯಾಯಾಲಯದ ವಿಚಾರಣೆಗಳು ಸಾರ್ವಜನಿಕ ವಿಚಾರಣೆಗಳಾಗಿವೆ. ವಕೀಲರು, ಪತ್ರಕರ್ತರು ಮತ್ತು ಅರ್ಜಿದಾರರಿಗೆ ಲಭ್ಯವಿರುವ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯವು ವಿಚಾರಣೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ನೆರವಾಗುತ್ತದೆ ಎಂದು ಸಂಘ ಹೇಳಿದೆ.
ಆದರೆ, ಕಾರ್ಮಿಕರ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿಯನ್ನು NSA ಅಡಿ ಬಂಧಿಸಿರುವುದಕ್ಕೆ ಸಂಬಂಧಿಸಿದ, ಮಾಧ್ಯಮ ಮತ್ತು ಸಾರ್ವಜನಿಕರಿಗೆ ಮಹತ್ವದ ಈ ಪ್ರಕರಣದ ವಿಚಾರಣೆಯ ನೇರ ಪ್ರಸಾರದ ವೇಳೆ ಶಬ್ದವನ್ನು ‘ಮ್ಯೂಟ್’ ಮಾಡಲಾಗಿದೆ ಎಂದು LAFC ಆಕ್ಷೇಪಿಸಿದೆ. ಈ ಪ್ರಕರಣಕ್ಕೆ ನೀಡಲಾಗಿರುವ ವಿಶೇಷ ಆದ್ಯತೆಯ ಕುರಿತು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಬಯಸುವುದಾಗಿ ಸಂಘ ಹೇಳಿದೆ.
ಭಾರತೀಯ ಚುನಾವಣಾ ಆಯೋಗದ (ECI) ಆಂತರಿಕ ಭಿನ್ನಾಭಿಪ್ರಾಯಗಳ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.






