Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಹಂಗಾಮಿ ಟಿಪ್ಪಣಿಗಳು
  5. ತಾಲಿಬಾನ್‌ನ ಖಾನ್ ಸಾಹೇಬರು ಚಿಗುರಿಸಿದ...

ತಾಲಿಬಾನ್‌ನ ಖಾನ್ ಸಾಹೇಬರು ಚಿಗುರಿಸಿದ ಕಹಿನೆನಪುಗಳು

ಹವ್ವಾ ಶುಕೂರ್, ಬೋಳಾರ್ಹವ್ವಾ ಶುಕೂರ್, ಬೋಳಾರ್15 Oct 2025 10:07 AM IST
share
ತಾಲಿಬಾನ್‌ನ ಖಾನ್ ಸಾಹೇಬರು ಚಿಗುರಿಸಿದ ಕಹಿನೆನಪುಗಳು

ತಾಲಿಬಾನಿಗಳ ವಿಷಯದಲ್ಲಿ ಮೋದಿ ಪಾಳಯದವರ ನಿಲುವು, ಹಠಾತ್ತನೆ ಯಾರೂ ಊಹಿಸಲಿಕ್ಕಾಗದಷ್ಟು ಬದಲಾಗಿ ಬಿಟ್ಟಿದೆ. ತಾಲಿಬಾನ್ ವಿರುದ್ಧ ಮೋದಿ ಪಾಳಯದ ಮಹಾರಥರು ಮಾಡಿದ್ದ ಅತ್ಯುಗ್ರ ಭಾಷಣಗಳನ್ನು ಜನರಿನ್ನೂ ಮರೆತಿಲ್ಲ. ಅಷ್ಟರಲ್ಲೇ ಒಬ್ಬ ತಾಲಿಬಾನಿ ನಾಯಕನಿಗೆ ಈ ಬಗೆಯ ರಾಜಾತಿಥ್ಯ ನೀಡುವುದರ ಔಚಿತ್ಯವೇನು?

ನಮ್ಮ ಮೋದಿ ಪಾಳಯವೆಂಬುದು ವಿರೋಧಾಭಾಸಗಳ ಸಂತೆ ಎಂಬ ಬಗ್ಗೆ ಯಾರಿಗೂ ಯಾವುದೇ ಸಂದೇಹ ಉಳಿದಿಲ್ಲ. ಒಂದು ಕಡೆ, ಪಾಕಿಸ್ತಾನವನ್ನು ಎಲ್ಲ ರೀತಿಯಲ್ಲೂ ಬಹಿಷ್ಕರಿಸಲಾಗುವುದು ಎಂದು ಮೋದಿಯವರು ಭಾರೀ ಭಾವುಕತೆ ನಟಿಸುತ್ತಾ ಉದ್ದುದ್ದ ಭಾಷಣ ಬಿಗಿಯುತ್ತಿರುತ್ತಾರೆ. ಇನ್ನೊಂದು ಕಡೆ ಭಾರತದ ತಂಡ ಪಾಕ್ ತಂಡದ ಜೊತೆ ಕ್ರಿಕೆಟ್ ಆಡುತ್ತದೆ. ಹಾಗೆಯೇ, ಒಂದು ಕಡೆ ನಮ್ಮವರು ಪಾಕ್ ಆಟಗಾರರ ಜೊತೆ ಹಲವು ಪಂದ್ಯಗಳನ್ನು ಆಡುವ ದೃಶ್ಯವನ್ನು ಜಗತ್ತೆಲ್ಲಾ ವೀಕ್ಷಿಸುತ್ತಿರುತ್ತದೆ. ಇನ್ನೊಂದೆಡೆ, ಅದೇ ಪಾಕ್ ತಂಡದವರ ಜೊತೆ ಶೇಕ್ ಹ್ಯಾಂಡ್ ಮಾಡಬಾರದು ಎಂದು ನಮ್ಮ ತಂಡಕ್ಕೆ ಸೂಚಿಸಲಾಗುತ್ತದೆ!

*****

ಇದೀಗ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶ ಸಚಿವ ಅಮೀರ್ ಖಾನ್ ಮುತ್ತಕಿ ಅಧಿಕೃತ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದಾರೆ. ಈ ಮೂಲಕ ಮೋದಿ ಪಾಳಯದ ವಿರೋಧಾಭಾಸಗಳ ಸಂತೆ ಮತ್ತೆ ನಗ್ನವಾಗಿದೆ. ರಶ್ಯ ಬಿಟ್ಟರೆ ಜಗತ್ತಿನ ಬೇರಾವುದೇ ದೇಶವು ಈ ತನಕ ತಾಲಿಬಾನ್ ಸರಕಾರಕ್ಕೆ ಅಧಿಕೃತ ಮನ್ನಣೆ ನೀಡಿಲ್ಲ. ಹಲವು ದೇಶಗಳು ತಾಲಿಬಾನ್ ಸರಕಾರದ ಜೊತೆ ಅನೌಪಚಾರಿಕ ರಾಜತಾಂತ್ರಿಕ ಸಂಪರ್ಕವನ್ನು ಮಾತ್ರ ಇಟ್ಟುಕೊಂಡಿವೆ. ಹೀಗಿರುವಾಗ ಭಾರತವು ತಾಲಿಬಾನ್ ಸರಕಾರದ ವಿದೇಶ ಸಚಿವರನ್ನು ಆಮಂತ್ರಿಸುವ ವಿಷಯದಲ್ಲಿ ತೋರಿರುವ ಅಮಿತೋತ್ಸಾಹವು ಹಲವರು ಹುಬ್ಬೇರಿಸುವಂತೆ ಮಾಡಿದೆ.

ತಾಲಿಬಾನಿಗಳ ವಿಷಯದಲ್ಲಿ ಮೋದಿ ಪಾಳಯದವರ ನಿಲುವು, ಹಠಾತ್ತನೆ ಯಾರೂ ಊಹಿಸಲಿಕ್ಕಾಗದಷ್ಟು ಬದಲಾಗಿ ಬಿಟ್ಟಿದೆ. ತಾಲಿಬಾನ್ ವಿರುದ್ಧ ಮೋದಿ ಪಾಳಯದ ಮಹಾರಥರು ಮಾಡಿದ್ದ ಅತ್ಯುಗ್ರ ಭಾಷಣಗಳನ್ನು ಜನರಿನ್ನೂ ಮರೆತಿಲ್ಲ. ಅಷ್ಟರಲ್ಲೇ ಒಬ್ಬ ತಾಲಿಬಾನಿ ನಾಯಕನಿಗೆ ಈ ಬಗೆಯ ರಾಜಾತಿಥ್ಯ ನೀಡುವುದರ ಔಚಿತ್ಯವೇನು? ನಾಲ್ಕು ವರ್ಷಗಳ ಹಿಂದಷ್ಟೇ, ತಾಲಿಬಾನ್ ಅಧಿಕಾರಕ್ಕೆ ಬಂದಾಗ, ಸಮಾಜವಾದಿ ಪಕ್ಷದ ಹಿರಿಯ ಸಂಸದ ಶಫೀಕುರಹ್ಮಾನ್ ಬರ್ಕ್ ಅವರು ‘ಅಫ್ಘಾನಿಸ್ತಾನದ ವಿಮೋಚನೆಗಾಗಿ ಹೋರಾಡಿದವರು’ ಎಂದು ತಾಲಿಬಾನ್ ಸರಕಾರವನ್ನು ಸಮರ್ಥಿಸುವ ಕೆಲವು ಮಾತುಗಳನ್ನು ಆಡಿದ್ದರು. ಅಷ್ಟಕ್ಕೇ ಯೋಗಿ ಸರಕಾರವು ಅವರ ವಿರುದ್ಧ ದೇಶದ್ರೋಹ ಸಹಿತ ಹಲವು ದೊಡ್ಡ ಆರೋಪಗಳನ್ನು ಹೊರಿಸಿ ಕೇಸು ದಾಖಲಿಸಿತ್ತು. ಮುಖ್ಯಮಂತ್ರಿ ಯೋಗಿ ವಿಧಾನ ಸಭೆಯಲ್ಲಿ ತಾಲಿಬಾನ್ ಮತ್ತು ಬರ್ಕ್ ವಿರುದ್ಧ ಭಾರೀ ಆಕ್ರೋಶ ಭರಿತ ಮಾತುಗಳನ್ನು ಕಾರಿದ್ದರು. ಇದೀಗ ಅದೇ ಯೋಗಿಯವರ ರಾಜ್ಯದಲ್ಲಿ ತಾಲಿಬಾನ್ ಸಚಿವರಿಗೆ ಭವ್ಯ ಆತಿಥ್ಯ ನೀಡಲಾಗಿದೆ.

******

ತಾಲಿಬಾನ್ ಸಂಘಟನೆಯ ಸ್ವರೂಪದ ಕುರಿತು ಜಗತ್ತಿನಲ್ಲಿ ಬಹಳಷ್ಟು ವಿವಾದಗಳಿವೆ. ಅದೊಂದು ಭಯೋತ್ಪಾದಕ ಸಂಘಟನೆ ಎಂಬುದು ಹಲವು ದೇಶಗಳ ನಿಲುವಾಗಿದೆ. 2001 ಸೆಪ್ಟಂಬರ್ 11ರಂದು (9/11) ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ದಾಳಿಯಲ್ಲಿ ಅಲ್ ಖಾಯಿದಾ ಪ್ರಧಾನ ಆರೋಪಿಯಾಗಿದ್ದರೆ, ಅದರ ಪಾಲುದಾರ ಎಂಬ ಆರೋಪ ತಾಲಿಬಾನ್ ಮೇಲಿದೆ. 2001ರಲ್ಲಿ ಪ್ರಸ್ತುತ ದಾಳಿ ನಡೆದಾಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವಿತ್ತು ಮತ್ತು ಅಫ್ಘಾನಿಸ್ತಾನವೇ ಅಲ್ ಖಾಯಿದಾದ ಕಾರ್ಯಾಚರಣೆಗಳ ಕೇಂದ್ರ ಎಂದು ನಂಬಲಾಗಿತ್ತು. ಆ ಬಳಿಕ ಅಫ್ಘಾನಿಸ್ತಾನದ ಮೇಲೆ ವ್ಯಾಪಕ ದಾಳಿ ನಡೆಸಿದ ಯುಎಸ್ ಪಡೆಗಳು ತಾಲಿಬಾನ್ ಸರಕಾರವನ್ನು ಪದಚ್ಯುತಗೊಳಿಸಿದವು. ಆ ಬಳಿಕ ಎರಡು ದಶಕಗಳ ತನಕ ಅಧಿಕಾರ ವಂಚಿತವಾಗಿದ್ದ ತಾಲಿಬಾನ್ 2021ರಲ್ಲಿ ಮತ್ತೆ ಕಾಬೂಲ್ ಮೇಲೆ ಮತ್ತು ಶೀಘ್ರವೇ ಅಫ್ಘಾನಿಸ್ತಾನದ ಹೆಚ್ಚಿನೆಲ್ಲಾ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿತು. ತಾಲಿಬಾನ್ ಮತ್ತು ಯುಎಸ್ ನಡುವಣ ಸಂಬಂಧಗಳ ವಿಷಯದಲ್ಲಿ ಜಗತ್ತಿನಲ್ಲಿ ಹಿಂದಿನಿಂದಲೇ ಹಲವು ಊಹಾಪೋಹಗಳಿವೆ. ಮೇಲ್ನೋಟಕ್ಕೆ ಯುಎಸ್ ಸರಕಾರವು ತಾಲಿಬಾನ್ ವಿರುದ್ಧ ಎಷ್ಟೇ ಉಗ್ರ ಮಾತನಾಡುತ್ತಿದ್ದರೂ, ಅದು ಗುಟ್ಟಾಗಿ ಪಾಕಿಸ್ತಾನದ ಐಎಸ್‌ಐ ಮೂಲಕ ತಾಲಿಬಾನ್‌ಗೆ ಹಲವು ಬಗೆಯ ನೆರವು ಒದಗಿಸುತ್ತಿದೆ ಮತ್ತು ಅದರಿಂದ ತನಗೆ ಬೇಕಾದ ಹಲವು ಕೆಲಸಗಳನ್ನು ಮಾಡಿಸುತ್ತಿದೆ ಎಂದು ಹಲವು ವೀಕ್ಷಕರು ವಾದಿಸುತ್ತಾರೆ.

*****

ತಾಲಿಬಾನ್ ಬಗ್ಗೆ ಜಗತ್ತು ಜಿಗುಪ್ಸೆ ತಾಳುವುದಕ್ಕೆ ಎರಡು ಮುಖ್ಯಕಾರಣಗಳಿವೆ:

ಮೊದಲನೆಯದು, ಧರ್ಮದ ವಿಷಯದಲ್ಲಿ ಅದರ ಧೋರಣೆ. ತಾವು ಕಟ್ಟುನಿಟ್ಟಾಗಿ ಇಸ್ಲಾಮ್ ಧರ್ಮವನ್ನು ಪಾಲಿಸುವವರು ಎಂದು ತಾಲಿಬಾನ್ ನಾಯಕರು ಹೇಳಿಕೊಳ್ಳುತ್ತಾರೆ. ಆದರೆ ತಾಲಿಬಾನಿಗಳು ಇಸ್ಲಾಮ್ ಧರ್ಮದ ವಿವಿಧ ಆದೇಶಗಳನ್ನು ಗ್ರಹಿಸುವ ಮತ್ತು ವಿಶ್ಲೇಷಿಸುವ ರೀತಿಯು ಜಗತ್ತಿನ ಪ್ರಧಾನಧಾರೆಯ ಮುಸ್ಲಿಮರ ಗ್ರಹಿಕೆ ಮತ್ತು ವಿಶ್ಲೇಷಣೆಗಿಂತ ತೀರಾ ಭಿನ್ನವಾಗಿದೆ. ತಾಲಿಬಾನಿಗಳು ಮುಖ್ಯವಾಗಿ ಅಫ್ಘಾನಿಸ್ತಾನದ ಪಶ್ತೂನ್ ಎಂಬ ಕಟ್ಟಾ ಸಂಪ್ರದಾಯವಾದಿ ಬುಡಕಟ್ಟಿಗೆ ಸೇರಿದವರು. ಅವರ ಅನೇಕ ನಂಬಿಕೆಗಳು ಮತ್ತು ಆಚರಣೆಗಳು ಇಸ್ಲಾಮ್ ಧರ್ಮಕ್ಕಿಂತ ಹೆಚ್ಚಾಗಿ ಪಶ್ತೂನ್ ಬುಡಕಟ್ಟಿನ ಪರಂಪರೆ ಹಾಗೂ ಸಂಪ್ರದಾಯಗಳಿಂದ ಪ್ರೇರಿತವಾಗಿರುತ್ತವೆ.

ಮಾನವ ಹಕ್ಕುಗಳು, ನಾಗರಿಕ ಅಧಿಕಾರಗಳು, ವಿವಿಧ ಜನಾಂಗಗಳ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳು ಇತ್ಯಾದಿ ವಿಷಯಗಳಲ್ಲಿ ಮತ್ತು ವಿಶೇಷವಾಗಿ ಮಹಿಳೆಯರ ಅಧಿಕಾರಗಳ ವಿಷಯದಲ್ಲಿ ಅವರ ಧೋರಣೆಗಳು ಹಲವು ಶತಮಾನಗಳಿಂದ ಪಶ್ತೂನ್ ಬುಡಕಟ್ಟಿನವರು ತಾಳುತ್ತಾ ಬಂದಿರುವ ಪ್ರತಿಗಾಮಿ ನಿಲುವಿನ ಮುಂದುವರಿಕೆಯಾಗಿದೆ. ಅದನ್ನು ಇಸ್ಲಾಮ್ ಧರ್ಮ ಅಥವಾ ಮುಸ್ಲಿಮರ ನಿಲುವು ಎಂದು ಕರೆಯುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ತಾಲಿಬಾನ್ ಸರಕಾರವು ಮಹಿಳೆಯರ ಮೇಲೆ ಹೇರಿರುವಂತಹ ನಿರ್ಬಂಧಗಳನ್ನು ಬೇರಾವುದೇ ಮುಸ್ಲಿಮ್ ಬಾಹುಳ್ಯದ ದೇಶದಲ್ಲಿ ಹೇರಲಾಗಿಲ್ಲ. ಯುಎಸ್‌ನಲ್ಲಿ ಈ ತನಕ ಯಾವುದೇ ಮಹಿಳೆ ದೇಶದ ಅಧ್ಯಕ್ಷ ಸ್ಥಾನವನ್ನು ಪಡೆದಿಲ್ಲ. ಆದರೆ ತುರ್ಕಿಯ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶ್ಯ, ಕಿರ್ಗಿಸ್ತಾನ, ಮೋರೇಷಿಯಸ್, ಸೆನೆಗಾಲ್, ಮಾಲಿ, ಟ್ಯುನಿಷಿಯಾ, ತಾಂಜಾನಿಯಾ, ಕೊಸೊವೊ, ಉತ್ತರ ಸೈಪ್ರಸ್ ಮುಂತಾದ ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಮಹಿಳೆಯರು ಪ್ರಧಾನಿ, ರಾಷ್ಟ್ರಪತಿ ಮುಂತಾದ ಪರಮೋಚ್ಚ ಹುದ್ದೆಗಳನ್ನು ಅಲಂಕರಿಸಿದ್ದಾರೆ. ತಮ್ಮ ದೇಶಗಳನ್ನು ಮುನ್ನಡೆಸಿದ್ದಾರೆ.

ಎರಡನೆಯದು, ಅಫ್ಘಾನಿಸ್ತಾನದ ಬಾಮಿಯಾನ್ ಪ್ರಾಂತದಲ್ಲಿದ್ದ ಬುದ್ಧನ ಎರಡು ಐತಿಹಾಸಿಕ ಬೃಹತ್ ಶಿಲಾ ವಿಗ್ರಹಗಳಿಗೆ ಹಾನಿ ಮಾಡಿದ್ದು. ಸುಮಾರು ಏಳನೇ ಶತಮಾನದಿಂದ ಅಲ್ಲಿದ್ದ ಪ್ರಸ್ತುತ ವಿಗ್ರಹಗಳನ್ನು UNESCO ‘ಜಾಗತಿಕ ಪರಂಪರೆಯ ತಾಣ’ ಎಂದು ಗುರುತಿಸಿತ್ತು. ಅದು ಜಗತ್ತಿನ ವಿವಿಧೆಡೆಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ತಾಣವೂ ಆಗಿತ್ತು. 1998 ಮತ್ತು 99ರಲ್ಲಿ ಕೆಲವು ಕಿಡಿಗೇಡಿ ಗುಂಪುಗಳು ಆ ವಿಗ್ರಹಗಳಿಗೆ ಆಂಶಿಕ ಹಾನಿ ಮಾಡಿದ್ದರು. 2001ರಲ್ಲಿ ಅಫ್ಘಾನಿಸ್ತಾನದಲ್ಲಿ ಮುಲ್ಲಾ ಉಮರ್ ನೇತೃತ್ವದ ತಾಲಿಬಾನ್ ಸರಕಾರವು ಅಧಿಕಾರ ವಹಿಸಿಕೊಂಡಿತು. ಅದೇ ವರ್ಷ ಮಾರ್ಚ್‌ನಲ್ಲಿ ಆ ವಿಗ್ರಹಗಳನ್ನು ಸಂಪೂರ್ಣ ವಿರೂಪಗೊಳಿಸಲಾಯಿತು. ಈ ಕೃತ್ಯವನ್ನು ಗೌತಮ ಬುದ್ಧನ ಭಕ್ತರು ಮಾತ್ರವಲ್ಲ ಜಾಗತಿಕ ಮುಸ್ಲಿಮ್ ಸಮುದಾಯದ ಸಹಿತ ಜಗತ್ತಿನ ಎಲ್ಲ ವಲಯಗಳು ಒಕ್ಕೊರಲಿನಿಂದ ತೀವ್ರವಾಗಿ ಖಂಡಿಸಿದವು. ಅವರ ಆ ಕುಕೃತ್ಯವನ್ನು ಇಂದಿಗೂ ಜಗತ್ತು ಕ್ಷಮಿಸಿಲ್ಲ.

*****

ಈ ನಡುವೆ ಕೆಲವು ಮಂದಿ, ಬುದ್ಧನ ವಿಗ್ರಹಗಳನ್ನು ವಿಕೃತಿಗೊಳಿಸಿದ ಕಳಂಕವನ್ನು ಇಸ್ಲಾಮ್ ಧರ್ಮ ಮತ್ತು ಮುಸ್ಲಿಮ್ ಸಮಾಜದ ಮೇಲೆ ಹೊರಿಸಲು ಬಹಳಷ್ಟು ಹೆಣಗಾಡಿದ್ದಾರೆ. ಇಸ್ಲಾಮ್ ಧರ್ಮವು ವಿಗ್ರಹಾರಾಧನೆ ತಪ್ಪೆಂದು ಸಾರಿದೆ. ಆದ್ದರಿಂದಲೇ ಅಫ್ಘಾನಿಸ್ತಾನದ ಮುಸ್ಲಿಮರು ಬುದ್ಧನ ವಿಗ್ರಹಗಳನ್ನು ವಿರೂಪಗೊಳಿಸಿದರು ಎಂದು ಆರೋಪಿಸುತ್ತಾರೆ. ನಿಜವಾಗಿ ತಾಲಿಬಾನಿಗಳು ಅಫ್ಘಾನಿಸ್ತಾನದ ಪ್ರಥಮ ಮುಸ್ಲಿಮರೇನಲ್ಲ. ಹಾಗೆಯೇ ಅವರು ಅಲ್ಲಿಯ ಎಲ್ಲ ಮುಸ್ಲಿಮರ ಪ್ರತಿನಿಧಿಗಳೂ ಅಲ್ಲ. ಅಲ್ಲಿಯ ಅದೆಷ್ಟೋ ಪಂಗಡಗಳು ತಾಲಿಬಾನ್ ವಿರುದ್ಧ ಯುದ್ಧ ನಿರತವಾಗಿವೆ. ಇಸ್ಲಾಮ್ ಧರ್ಮ, ಅಫ್ಘಾನಿಸ್ತಾನಕ್ಕೆ ಹೊಸದಲ್ಲ. ಅಲ್ಲಿ ಏಳನೇ ಶತಮಾನದಲ್ಲೇ ಮುಸ್ಲಿಮರಿದ್ದರು. ಅಫ್ಘಾನಿಸ್ತಾನದಲ್ಲಿ ಬುದ್ಧನ ವಿಗ್ರಹ ಸ್ಥಾಪನೆಯಾದ ಸಮೀಪಕಾಲದಲ್ಲೇ ಅಲ್ಲಿಗೆ ಇಸ್ಲಾಮ್ ಧರ್ಮದ ಪ್ರವೇಶವಾಗಿತ್ತು. ಮಾತ್ರವಲ್ಲ, ಅಲ್ಲಿ ಶತಮಾನಗಳ ಹಿಂದೆಯೇ ಪ್ರಖ್ಯಾತ ಇಸ್ಲಾಮೀ ಶಿಕ್ಷಣ ಕೇಂದ್ರಗಳೂ ಇದ್ದವು. ಜಗತ್ತಿನ ಹಲವೆಡೆಯ ಜನರು ಉನ್ನತ ಶಿಕ್ಷಣಕ್ಕಾಗಿ ಅಫ್ಘಾನಿಸ್ತಾನದ ಮದ್ರಸಗಳಿಗೆ ಹೋಗುತ್ತಿದ್ದರು. ಜಗದ್ವಿಖ್ಯಾತ ಜನಪ್ರಿಯ ಪರ್ಷಿಯನ್ ಕವಿ ಮೌಲಾನಾ ಜಲಾಲುದ್ದೀನ್ ರೂಮಿ (1207-1273) ಜನಿಸಿದ್ದು ಆ ಕಾಲದಲ್ಲಿ ಅಫ್ಘಾನಿಸ್ತಾನದ ಭಾಗವಾಗಿದ್ದ (ಈಗ ತಾಜೆಕಿಸ್ತಾನ್ ಭಾಗವಾಗಿರುವ) ಬಲ್ಕ್ ನಲ್ಲಿ. ಅಲ್ಲಿ ಅವರ ತಂದೆ ಬಹಾವುದ್ದೀನ್ ಒಂದು ಮದ್ರಸದ ಮುಖ್ಯಸ್ಥರಾಗಿದ್ದರು. ರೂಮಿ ತಮ್ಮ ವಿದ್ಯಾರ್ಥಿ ಜೀವನದ ಒಂದು ದೊಡ್ಡ ಭಾಗವನ್ನು ಅಲ್ಲೇ ಕಳೆದಿದ್ದರು. ಮುಸ್ಲಿಮ್ ಸಮಾಜ, ಇಸ್ಲಾಮ್ ಧರ್ಮ ಮತ್ತು ಮತ್ತು ಬುದ್ಧನ ಆ ಎರಡು ವಿಗ್ರಹಗಳು ಅಫ್ಘಾನಿಸ್ತಾನದಲ್ಲಿ ಕನಿಷ್ಠವೆಂದರೂ ಕಳೆದ 13 ಶತಮಾನಗಳಿಂದ ಸಂಪೂರ್ಣ ಸಾಮರಸ್ಯದೊಂದಿಗೆ ಸಹಜೀವನ ನಡೆಸಿವೆ. ಇಂದು ಇರುವುದಕ್ಕಿಂತ ಹೆಚ್ಚು ಭವ್ಯವಾದ ಮಸೀದಿಗಳು, ಹೆಚ್ಚು ಖ್ಯಾತವಾಗಿದ್ದ ಮದ್ರಸಗಳು, ತುಂಬಾ ಪ್ರಸಿದ್ಧರಾಗಿದ್ದ ಮುಸ್ಲಿಮ್ ವಿದ್ವಾಂಸರು, ಮಾತ್ರವಲ್ಲ, ಮೊನ್ನೆ ನಮ್ಮ ದೇಶಕ್ಕೆ ಬಂದ ಅಮೀರ್ ಖಾನ್ ಮುತ್ತಕಿಗಿಂತ ದೊಡ್ಡ ಮುಂಡಾಸು ಮತ್ತು ಅವರಿಗಿಂತ ಉದ್ದ ಗಡ್ಡವಿದ್ದ ಪಠಾಣ್ ಮುಸ್ಲಿಮರು ಅದೇ ಅಫ್ಘಾನಿಸ್ತಾನದಲ್ಲಿದ್ದರು. ಪ್ರಸ್ತುತ 13 ಶತಮಾನಗಳ ಅವಧಿಯಲ್ಲಿ ಅವರು ಬುದ್ಧನನ್ನು ಪೂಜಿಸಲೂ ಇಲ್ಲ, ಅವನ ಪ್ರತಿಮೆಗಳ ಗೋಜಿಗೂ ಹೋಗಲಿಲ್ಲ. ಅವರು ಅವುಗಳನ್ನು ಅವುಗಳ ಪಾಡಿಗೆ ಬಿಟ್ಟದ್ದು ಮಾತ್ರವಲ್ಲ ಅವುಗಳಿಗೆ ರಕ್ಷಣೆಯನ್ನೂ ಒದಗಿಸಿದ್ದರು. ಜಗತ್ತಿನ ವಿವಿಧ ಭಾಗಗಳಿಂದ ಬುದ್ಧನ ಸಂದರ್ಶನಕ್ಕೆಂದು ಬರುತ್ತಿದ್ದ ಯಾತ್ರಿಗಳಿಗೆ ಬೇಕಾದ ಸವಲತ್ತುಗಳನ್ನೂ ಒದಗಿಸಿದ್ದರು.

*****

ಬುದ್ಧನ ವಿಗ್ರಹಕ್ಕೆ ಸಂಬಂಧಿಸಿದಂತೆ ತಾಲಿಬಾನ್‌ನ ಒಳ ವಲಯದಲ್ಲೇ ತೀರಾ ತದ್ವಿರುದ್ಧ ನಿಲುವುಗಳಿವೆ. ಕೆಲವರು ಆ ಕುರಿತು ತಮಗೆ ಪಶ್ಚಾತ್ತಾಪವೇನೂ ಇಲ್ಲ ಎಂದು ಹೇಳಿದರೆ ಮತ್ತೆ ಕೆಲವರು ಆ ಕುರಿತು ವಿವಿಧ ವಿವರಣೆಗಳನ್ನು ನೀಡಿದ್ದಾರೆ. ಉದಾ: ವಿಗ್ರಹವನ್ನು ವಿರೂಪಗೊಳಿಸಿದ ಘಟನೆಯ ಕೆಲವೇ ದಿನ ಬಳಿಕ ಲಾಸ್ ಏಂಜಲೀಸ್‌ನಲ್ಲಿ ಸದರ್ನ್ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ (USC) ಯಲ್ಲಿ ನಡೆದ ಸಭೆಯೊಂದರಲ್ಲಿ, ತಾಲಿಬಾನ್ ಸರಕಾರದ ರಾಯಭಾರಿ ಸಯ್ಯದ್ ರಹ್ಮತುಲ್ಲಾ ಹಾಶಿಮಿ ನೀಡಿದ ವಿವರಣೆ ಹೀಗಿತ್ತು.

‘‘ತಾಲಿಬಾನ್ ಆ ಕೃತ್ಯವನ್ನು ಯಾವುದೇ ಧಾರ್ಮಿಕ ಕಾರಣದಿಂದ ಮಾಡಿರಲಿಲ್ಲ. ತಾಲಿಬಾನ್ ಪಡೆಗಳು ಮೂರು ವರ್ಷಗಳ ಹಿಂದೆಯೇ ಬಾಮಿಯಾನ್ ಪ್ರದೇಶವನ್ನು ವಶಪಡಿಸಿಕೊಂಡಿದ್ದವು. ತಾಲಿಬಾನ್ ಇಚ್ಛಿಸಿದ್ದರೆ ಮೂರುವರ್ಷ ಮುನ್ನವೇ ಬುದ್ಧನ ವಿಗ್ರಹಗಳನ್ನು ಗುರಿಯಾಗಿಸಬಹುದಿತ್ತು. ಆದರೆ ಅದು ನಮ್ಮ ನೈಜ ಗುರಿಯಾಗಿರಲಿಲ್ಲ. ನಿರಂತರ ಯುದ್ಧ ಮತ್ತು ಅಂತರ್ ರಾಷ್ಟ್ರೀಯ ಬಹಿಷ್ಕಾರದಿಂದಾಗಿ ಅಫ್ಘಾನಿಸ್ತಾನದ ಜನತೆ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದರು. ವಿಶೇಷವಾಗಿ ಆಹಾರ ಮತ್ತು ಚಳಿನಿರೋಧಕ ಬಟ್ಟೆಬರೆಗಳ ಕೊರತೆಯಿಂದಾಗಿ ಒಂದು ತಿಂಗಳ ಹಿಂದಷ್ಟೇ ನಮ್ಮ ಕನಿಷ್ಠ 700 ಮಕ್ಕಳು ಸಾವನ್ನಪ್ಪಿದ್ದರು. ಈ ಸ್ಥಿತಿಯಲ್ಲಿ ನಮ್ಮ ಮಕ್ಕಳ ರಕ್ಶಣೆಗಾಗಿ ನಮಗೆ ನೆರವು ಒದಗಿಸಬೇಕೆಂದು ನಾವು ಜಗತ್ತಿನ ಹಲವು ದೇಶಗಳಿಗೆ ಮನವಿಯನ್ನು ಕಳಿಸಿದೆವು. ಆ ಸಂದರ್ಭದಲ್ಲಿ ಹಲವು ದೇಶಗಳು ‘ಜಾಗತಿಕ ಪರಂಪರೆಯ ತಾಣ’ ಎಂದು ಗುರುತಿಸಲಾದ ಬುದ್ಧನ ಪ್ರತಿಮೆಗಳಿರುವ ಸ್ಥಳದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಎಷ್ಟು ಬೇಕಾದರೂ ಅನುದಾನ ನೀಡಲು ತಯಾರಿದ್ದವು. ಆದರೆ ನಮ್ಮ ಮಕ್ಕಳ ಪ್ರಾಣರಕ್ಷಣೆಗಾಗಿ ಮಾತ್ರ ಯಾವುದೇ ನೆರವು ನೀಡಲು ಯಾರೂ ತಯಾರಿರಲಿಲ್ಲ. ಪ್ರತಿಮೆಗಳಿರುವ ತಾಣದ ಅಭಿವೃದ್ಧಿಗಾಗಿ ಒಂದು ದೊಡ್ಡ ಮೊತ್ತವನ್ನು ನೀಡಲು ಮುಂದಾದ ಸ್ವೀಡನ್ ನ ಒಂದು ಸಂಸ್ಥೆಯೊಂದಿಗೆ ನಾವು, ಅಷ್ಟೇ ಮೊತ್ತವನ್ನು ನಮ್ಮ ಮಕ್ಕಳ ಕಲ್ಯಾಣಕ್ಕಾಗಿ ನೀಡಬೇಕೆಂದು ವಿನಂತಿಸಿದ್ದೆವು. ಅವರೂ ಅದಕ್ಕೆ ತಯಾರಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಸಂಭವಿಸಿದ ಕೃತ್ಯ ಅದಾಗಿತ್ತು.’’

2004ರಲ್ಲಿ ಒಂದು ಸಂದರ್ಶನದಲ್ಲಿ ಮುಲ್ಲಾ ಉಮರ್ ಕೂಡಾ ಬಹುತೇಕ ವಿಗ್ರಹಗಳ ದುರಂತದ ಕುರಿತು ಇದೇ ಬಗೆಯ ವಿವರಣೆ ನೀಡುತ್ತಾ, ‘‘ಮಾನವ ಜೀವಗಳಿಗಿಂತ ಕಲ್ಲಿನ ವಿಗ್ರಹಕ್ಕೆ ಹೆಚ್ಚು ಮಹತ್ವ ನೀಡಲಾದಾಗ ನಡೆದ ಕೃತ್ಯ’’ ಎಂದು ವಿಶ್ಲೇಷಿಸಿದ್ದರು. ಆದರೆ ಇಂತಹ ಯಾವ ವಿವರಣೆಗೂ, ತಾಲಿಬಾನ್ ಮೇಲಿನ ಕಳಂಕವನ್ನು ತೊಳೆಯಲು ಸಾಧ್ಯವಾಗಿಲ್ಲ.

*****

ಧರ್ಮದ ಹೆಸರಲ್ಲಿ ಗದ್ದುಗೆ ಹಿಡಿದ ನಮ್ಮ ದೇಶದ ನಾಯಕರು ತಮ್ಮ ಆದರಣೀಯ ಅತಿಥಿಯಾಗಿದ್ದ ತಾಲಿಬಾನ್ ನಾಯಕನೊಡನೆ, ಸದ್ಯ ಪುನರ್ನಿರ್ಮಾಣವಾಗುತ್ತಿರುವ ಬುದ್ಧನ ವಿಗ್ರಹಗಳ ಬಗ್ಗೆ ಒಂದಷ್ಟು ಗಂಭೀರ ವಿಚಾರ ವಿನಿಮಯ ನಡೆಸಬೇಕಿತ್ತು. ಹಾಗೆಯೇ 1999ರಲ್ಲಿ ನಡೆದ, 178 ಪ್ರಯಾಣಿಕರು ಮತ್ತು 11 ಮಂದಿ ಸಿಬ್ಬಂದಿಯಿದ್ದ ನಮ್ಮ ಇಂಡಿಯನ್ ಏರ್‌ಲೈನ್ಸ್‌ನ ವಿಮಾನದ ಅಪಹರಣದ ಕುರಿತು ಕೂಡಾ ತಾಲಿಬಾನ್ ನಾಯಕನ ಜೊತೆ ಮಾತನಾಡಬೇಕಿತ್ತು. ಏಕೆಂದರೆ ಪ್ರಸ್ತುತ ಅಪಹರಣ ನಡೆಸಿದ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಹರ್ಕತುಲ್ ಮುಜಾಹಿದೀನ್ ಜೊತೆ ತಾಲಿಬಾನ್‌ಗೆ ನಿಕಟ ಸಂಬಂಧ ಇತ್ತೆಂಬುದು ಎಲ್ಲರಿಗೆ ಗೊತ್ತಿದೆ. ಅಪಹರಣಕಾರರು ತಾವು ತಮ್ಮ ವಶದಲ್ಲಿರುವ ಭಯೋತ್ಪಾದಕರನ್ನು ಬಿಡುಗಡೆಗೊಳಿಸಬೇಕಿದ್ದರೆ, ಭಾರತದ ಜೈಲಲ್ಲಿದ್ದ ಮಸೂದ್ ಅಝರ್ ಸಹಿತ ಮೂರು ಮಂದಿ ಪಾಕ್ ಭಯೋತ್ಪಾದಕರನ್ನು ತಮಗೆ ಒಪ್ಪಿಸಬೇಕೆಂಬ ಶರತ್ತನ್ನು ಮುಂದಿಟ್ಟಿದ್ದರು. ತಮ್ಮ ಬೇಡಿಕೆ ಈಡೇರಿದ ಬಳಿಕವಷ್ಟೇ, ಅಫ್ಘಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದಲ್ಲಿದ್ದ ಅಪಹೃತ ವಿಮಾನ ಮತ್ತು ಒತ್ತೆಯಾಳುಗಳನ್ನು ಅವರು ಬಿಟ್ಟುಕೊಟ್ಟಿದ್ದರು. ಅದು ಭಾರತೀಯರು ಎಂದೂ ಮರೆಯಬಾರದ ಒಂದು ದುರಂತವಾಗಿತ್ತು.

ಇಂದು ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬೇರೆ ಯಾವುದಾದರೂ ಸರಕಾರ ಇದ್ದಿದ್ದರೆ ಮೋದಿ ಪಾಳಯದವರು ಇದನ್ನೆಲ್ಲಾ ದೇಶಕ್ಕೆ ಬಿಡಿಬಿಡಿಯಾಗಿ ನೆನಪಿಸಲು, ಕನಿಷ್ಠ ಒಂದು ತಿಂಗಳಷ್ಟು ದೀರ್ಘವಾದ ಆವೇಶಪೂರ್ಣ, ಆಕ್ರೋಶಪೂರ್ಣ ರಾಷ್ಟ್ರೀಯ ಆಂದೋಲನವನ್ನೇ ನಡೆಸಿಬಿಡುತ್ತಿದ್ದರು. ತಾಲಿಬಾನ್ ಮಂತ್ರಿಯನ್ನು ಸ್ವಾಗತಿಸಿದ್ದು ಪರಮ ದೇಶದ್ರೋಹದ ಕೃತ್ಯ ಎಂದು ದೂಷಿಸುತ್ತಿದ್ದರು. ಮುತ್ತಕಿ ಭೇಟಿ ನೀಡಿದ ದೇವ್ ಬಂದ್ ಮದ್ರಸ ಜಾಗತಿಕ ಭಯೋತ್ಪಾದನೆಯ ಕೇಂದ್ರ ಎಂದು ಆರೋಪಿ ಸುತ್ತಿದ್ದರು. ಮುತ್ತಕಿಯನ್ನು ಸ್ವಾಗತಿಸಿದ್ದರಿಂದ ದೇಶದ ಭದ್ರತೆಗೆ ತೀವ್ರ ಅಪಾಯವಿದೆ ಮತ್ತು ಇಲ್ಲಿ ಭಯೋತ್ಪಾದನೆ ಹೆಚ್ಚಲಿದೆ ಎಂದು ಭವಿಷ್ಯ ನುಡಿಯುತ್ತಿದ್ದರು. ಸಂಶಯ ಬೇಡ.

share
ಹವ್ವಾ ಶುಕೂರ್, ಬೋಳಾರ್
ಹವ್ವಾ ಶುಕೂರ್, ಬೋಳಾರ್
Next Story
X