ಹಾಸನ | ಬೈಕ್ ಅಪಘಾತ: ಯುವತಿ ಮೃತ್ಯು

ಹಾಸನ: ಬೈಕೊಂದು ರಸ್ತೆ ಹಂಪ್ಸ್ ನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಕೈಗಾರಿಕಾ ಪ್ರದೇಶದಲ್ಲಿ ರವಿವಾರ ರಾತ್ರಿ ನಡೆದಿದೆ.
ಹಾಸನದ ಸತ್ಯಮಂಗಲ ಬಡಾವಣೆಯ ಪ್ರಿಯಾ(23) ಮೃತಪಟ್ಟವರು. ಜೊತೆಗಿದ್ದ ಸ್ವಾತಿ (24) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಇವರಿಬ್ಬರು ಕಳೆದ ರಾತ್ರಿ ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿದ್ದ ಹಂಪ್ಸ್ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಪ್ರಿಯಾ ಕೊನೆಯುಸಿರೆಳೆದಿದ್ದರು.
ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





