ʼದಸರಾ ಉದ್ಘಾಟನೆʼಗೆ ಆಹ್ವಾನ ನನಗೆ ಅತೀವ ಸಂತೋಷವನ್ನು ತಂದಿದೆ : ಬಾನು ಮುಷ್ತಾಕ್

ಬಾನು ಮುಷ್ತಾಕ್ Photo : AP
ಹಾಸನ : ದಸರಾ ಎಂಬುದು ನಮ್ಮೆಲ್ಲರ ನಾಡಹಬ್ಬವಾಗಿದ್ದು, ನಾಡು-ನುಡಿಗೆ ಗೌರವ ಸಲ್ಲಿಸುವ ಮತ್ತು ಸಂಭ್ರಮಿಸುವ ಕರ್ತವ್ಯವನ್ನು ನಾವು ಸಂತೋಷದಿಂದ ಪಾಲಿಸಬೇಕು. ರಾಜ್ಯದ ಜನತೆಯ ಜೊತೆಗೆ ಇಡೀ ದೇಶದ ಜನರು ಈ ಹಬ್ಬದಲ್ಲಿ ಸಂತೋಷದಿಂದ ಭಾಗವಹಿಸಬೇಕಾಗಿದೆ ಎಂದು ʼಬೂಕರ್ ಪ್ರಶಸ್ತಿʼ ವಿಜೇತೆ ಲೇಖಕಿ ಬಾನು ಮುಷ್ತಾಕ್ ಹೇಳಿದ್ದಾರೆ.
ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್ ಅವರು, ಈ ಸಂಭ್ರಮದ ಕ್ಷಣದಲ್ಲಿ ಮುಖ್ಯ ಪಾತ್ರವಹಿಸಲು ಆಹ್ವಾನ ನೀಡಿರುವುದು ನನಗೆ ಅತೀವ ಸಂತೋಷವನ್ನು ತಂದಿದೆ. ಈ ಗೌರವಕ್ಕಾಗಿ ನಾನು ನನ್ನ ಸಂಗಡಿಗರು, ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಾನು ಯಾವುದೇ ಲಾಬಿ ಅಥವಾ ಅರ್ಜಿಯ ಮೂಲಕ ಈ ಅವಕಾಶವನ್ನು ಪಡೆದಿಲ್ಲ. ಇದು ದೈವದತ್ತವಾದ ಅವಕಾಶವೆಂದು ಭಾವಿಸುತ್ತೇನೆ. ಈ ಗೌರವಕ್ಕೆ ನಾನು ಯಾವ ಕಾರಣದಿಂದ ಅರ್ಹನಾಗಿದ್ದೇನೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಲಂಡನ್ನಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಾನು ಮಾಡಿದ್ದೇನೆ. ಕೆಲವು ದಿನಗಳ ಹಿಂದೆ ವಿದೇಶದಲ್ಲಿದ್ದಾಗ, ಕನ್ನಡದ ಪುಸ್ತಕದ ಒಂದು ಪುಟವನ್ನು ಓದಿ, ಕನ್ನಡ ಭಾಷೆಯ ಸೊಗಸನ್ನು ಅಲ್ಲಿನ ಜನರಿಗೆ ಕೇಳಿಸಿದೆ. ಆ ಕ್ಷಣದಲ್ಲಿ ಅವರು ಕನ್ನಡ ಭಾಷೆಯನ್ನು ಕೇಳಿ ಸಂಭ್ರಮಿಸಿದರು. ಈ ರೀತಿಯಾಗಿ ಕನ್ನಡದ ಘನತೆಯನ್ನು ವಿದೇಶದಲ್ಲಿ ಹರಡುವ ವಿಶೇಷ ಅವಕಾಶ ನನಗೆ ದೊರೆತಿದೆ ಎಂದರು.
ಒಂದು ತಿಂಗಳ ಹಿಂದೆ ಕೇರಳದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೋನ್ ಮೂಲಕ ಮಾತನಾಡಿ, ಸೆಪ್ಟೆಂಬರ್ 22 ರಂದು ದಸರಾ ಮಹೋತ್ಸವಕ್ಕೆ ಬಿಡುವು ಮಾಡಿಕೊಳ್ಳುವಂತೆ ಸೂಚಿಸಿದರು. ಕೆಲವು ದಿನಗಳ ಹಿಂದೆ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಹ್ವಾನಿತನಾಗಿರುವುದಕ್ಕೆ ನಾನು ಅತೀವ ಸಂತೋಷವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.







