ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದ ಸಚಿವ ತಂಗಡಗಿ

ಹಾಸನ: ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಶನಿವಾರ ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದೇವಿಯ ದರ್ಶನ ಪಡೆದರು.
ಮೊದಲು ಹಾಸನಾಂಬೆ ದೇವಿ ದರ್ಶನ ಪಡೆದು ನಂತರ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ಧೇಶ್ವರ ದೇವರ ದರ್ಶನ ಪಡೆದರು.
ಬಳಿಕ ಮಾತನಾಡಿದ ಸಚಿವರು, ಹಾಸನಾಂಬ ದೇವಿಯ ದರ್ಶನ ಪಡೆದಿದ್ದೇವೆ. ನಮ್ಮ ರಾಜ್ಯದ ಜನರಿಗೆ, ರೈತರಿಗೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಈ ಬಾರಿ ದರ್ಶನ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಿರ್ವಹಿಸಿದ್ದಾರೆ. ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ, ಆರಾಮವಾಗಿ ದರ್ಶನ ಆಗುತ್ತಿದೆ ಎಂದು ಪ್ರಶಂಸಿಸಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಕುರಿತು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮಾತನಾಡಿ, ಆಯ್ಕೆ ಸಮಿತಿ ರಚನೆಗೆ ಸಂಬಂಧಿಸಿದ ಆದೇಶವನ್ನು ಈಗಾಗಲೇ ನಿನ್ನೆ ಹೊರಡಿಸಿದ್ದೇವೆ. ಅಕ್ಟೋಬರ್ 15ರಂದು ಮೊಟ್ಟಮೊದಲ ಸಭೆ ಕರೆದಿದ್ದೇನೆ. ಎರಡು ಮೂರು ಸಭೆಗಳ ನಂತರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.





