ಜಿಪಂ–ತಾಪಂ ಚುನಾವಣೆಗಳಿಗೆ ಸಿದ್ಧತೆ; ಕೋರ್ಟ್ ತೀರ್ಪಿನ ನಿರೀಕ್ಷೆ: ಸಿಎಂ ಸಿದ್ದರಾಮಯ್ಯ

ಹಾಸನ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರಕಾರ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಾಸನಾಂಬೆ ದೇವಿ ದರ್ಶನಕ್ಕಾಗಿ ಇಂದು ಬೆಳಿಗ್ಗೆ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಪಂ–ತಾಪಂ ಚುನಾವಣೆ ವಿಚಾರ ಕೋರ್ಟ್‌ನಲ್ಲಿ ಇದೆ. ನಾವು ಚುನಾವಣೆ ಮಾಡಲು ಸಂಪೂರ್ಣ ಸಿದ್ಧರಾಗಿದ್ದೇವೆ. ಕೋರ್ಟ್ ಸೂಚನೆ ಸಿಗುತ್ತಿದ್ದಂತೆಯೇ ಚುನಾವಣೆ ನಡೆಸುತ್ತೇವೆ. ಪ್ರಜಾಪ್ರಭುತ್ವ ಬಲವಾಗಲು ಚುನಾವಣೆ ಅಗತ್ಯ ಎಂದು ಹೇಳಿದರು.
ರಾಜ್ಯದಲ್ಲಿನ ಆರೆಸ್ಸೆಸ್ ಚಟುವಟಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರಿ ಶಾಲೆ ಅಥವಾ ಸಾರ್ವಜನಿಕ ಜಾಗಗಳಲ್ಲಿ ಯಾವುದೇ ಸಂಘಟನೆ ಚಟುವಟಿಕೆ ನಡೆಸಲು ಅವಕಾಶ ಇರಬಾರದು. ಯಾರಿಗೂ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ತಮಿಳುನಾಡಿನಲ್ಲಿ ನಿಷೇಧ ಹೇಗೆ ಜಾರಿಯಾಗಿದೆ ಎಂಬುದರ ವರದಿ ಪಡೆದು ರಾಜ್ಯದಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಚುನಾವಣೆ ಮುಗಿದ ಬಳಿಕ ನೋಡೋಣ. ಹೈಕಮಾಂಡ್ ಬಿಹಾರ ಚುನಾವಣೆಯಲ್ಲಿ ತೊಡಗಿದೆ, ನಂತರ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಸನಾಂಬೆ ದೇವಿ ದರ್ಶನಕ್ಕೆ ಆಗಮಿಸಿದ ಸಿಎಂ, ಉಸ್ತುವಾರಿ ಸಚಿವರು ಕೃಷ್ಣ ಬೈರೇಗೌಡ, ಶಿವಲಿಂಗೇಗೌಡ ಹಾಗೂ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.







