ಹಾಸನಾಂಬ ಉತ್ಸವ ವೇದಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ: ಪ್ರತಿಭಟನೆ ಕೈಬಿಟ್ಟ ಜೆಡಿಎಸ್ ಶಾಸಕರು

ಹಾಸನ : ಹಾಸನಾಂಬ ಉತ್ಸವದ ವೇದಿಕೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಗೌರವ ತೋರಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಎಚ್.ಪಿ.ಸ್ವರೂಪ್, ಎ.ಮಂಜು, ಮಾಜಿ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ‘‘ಜಿಲ್ಲಾಧಿಕಾರಿ ಕ್ಷಮೆ ಕೇಳುವವರೆಗೆ ಇಲ್ಲಿ ನಿಂತೇ ಇರುತ್ತೇವೆ’’ ಎಂದು ಪಟ್ಟು ಹಿಡಿದಿದ್ದ ಶಾಸಕರು, ಜಿಲ್ಲಾಧಿಕಾರಿ ಡಾ.ಲತಾ ಕುಮಾರಿ ಸ್ಥಳಕ್ಕೆ ಬಂದ ಕೂಡಲೇ ತಮ್ಮ ಶೈಲಿಯನ್ನೇ ಬದಲಿಸಿ ಕೊನೆಗೆ ಪ್ರತಿಭಟನೆ ಕೈಬಿಟ್ಟ ಪ್ರಸಂಗ ನಡೆದಿದೆ.
ಜಿಲ್ಲಾಧಿಕಾರಿ ಬರುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್.ಪಿ.ಸ್ವರೂಪ್, ಹಾಸನಾಂಬ ಉತ್ಸವದಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಿರುವುದು ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಗೌರವ ತೋರಿಸಿರುವುದನ್ನು ಖಂಡಿಸಿದರು. ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಯವರು ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟನೆ ನೀಡುತ್ತ, ಪರಿಸ್ಥಿತಿಯನ್ನು ಶಾಂತಗೊಳಿಸಲು ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಪರಿಸ್ಥಿತಿ ಶಮನಗೊಂಡ ಬಳಿಕ, ಜಿಲ್ಲಾಧಿಕಾರಿಯವರು ಹಾಸನಾಂಬೆ ದೇವಾಲಯದ ಪ್ರಸಾದವನ್ನು ಸ್ವತಃ ತರಿಸಿ ಶಾಸಕರಿಗೂ ಕಾರ್ಯಕರ್ತರಿಗೂ ನೀಡಿದರು. ಇದೆ ವೇಳೆ ಮಾಜಿ ಶಾಸಕ ಲಿಂಗೇಶ್, ಎಚ್.ಕೆ.ಕುಮಾರಸ್ವಾಮಿ, ಮೇಯರ್ ಗಿರೀಶ್ ಚನ್ನವೀರಪ್ಪ, ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮಂಜೇಗೌಡ, ಸುಮುಖ ರಘು, ಬಿದರಿಕೆರೆ ಜಯರಾಂ, ಮಹಾನಗರ ಪಾಲಿಕೆ ಕಾರ್ಪೊರೇಟರ್ ಇತರರು ಉಪಸ್ಥಿತರಿದ್ದರು.







