ಹಾಸನ | ಕೋಟ್ಯಂತರ ರೂ. ವಂಚನೆ ಆರೋಪ; ನಡುರಸ್ತೆಯಲ್ಲಿ ಮಹಿಳೆಗೆ ಥಳಿಸಿದ ದೃಶ್ಯ ವೈರಲ್

ಹಾಸನ : ಅನೇಕ ಮಹಿಳೆಯರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ನಡುರಸ್ತೆಯಲ್ಲಿ ಲೇಡೀಸ್ ಡ್ರೆಸ್ ಟೈಲರ್ ಹೇಮಾವತಿ ಎಂಬವರನ್ನು ಮಹಿಳೆಯರು ಥಳಿಸಿದ ಘಟನೆ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ನಗರದ ಅರಳೇಪೇಟೆ ರಸ್ತೆಯಲ್ಲಿದ್ದ ‘‘ಜ್ಯೋತಿ ಡ್ರೆಸ್ ಮೇಕರ್ಸ್’’ ಅಂಗಡಿ ನಡೆಸುತ್ತಿದ್ದ ಹೇಮಾವತಿ, ಮಹಿಳಾ ಗ್ರಾಹಕರ ವಿಶ್ವಾಸ ಗಳಿಸಿ ಅವರಿಂದ ಲಕ್ಷಾಂತರ ರೂ. ಪಡೆದು ಮೋಸ ಮಾಡಿದರೆೆಂದು ಆರೋಪಿಸಲಾಗಿದೆ. ಚಿಟ್ ವ್ಯವಹಾರ ಹಾಗೂ ಸಾಲದ ನೆಪದಲ್ಲಿ ಮಹಿಳೆಯರಿಂದ 3 ಕೋಟಿ ರೂ.ಗಿಂತ ಹೆಚ್ಚು ಹಣ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.
ತನ್ನ ಮಗಳನ್ನು ವಿದೇಶದಲ್ಲಿ ಎಮ್‌ಎಸ್ ಓದಿಸಬೇಕೆಂದು ಚಿಟ್ ವೊಂದರಲ್ಲಿ ಕೋಟ್ಯಂತರ ಹೂಡಿಕೆ ಮಾಡಿದ್ದೇನೆ. ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟು ಹಣ ಸಿಗಲಿದೆ ಎಂದು ಹೇಳಿ ನಕಲಿ ಚೀಟಿ ಸ್ಲಿಪ್ ತೋರಿಸಿ, ಪರಿಚಿತ ಮಹಿಳೆಯರಿಂದ ಲಕ್ಷಾಂತರ ಹಣ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಹತ್ತಾರು ವರ್ಷಗಳಿಂದ ಟೈಲರಿಂಗ್ ಕೆಲಸ ಮಾಡುತ್ತಿದ್ದ ಹೇಮಾವತಿ, ತನ್ನ ನಿತ್ಯ ಗ್ರಾಹಕರನ್ನೇ ನಂಬಿಸಿ ಅವರಿಂದ 45 ಲಕ್ಷ ರೂ.ವರೆಗೆ ಹಣ ಪಡೆದು ವಂಚನೆ ಮಾಡಿದ್ದಾರೆ. ವಂಚನೆ ಬಯಲಾಗುತ್ತಿದ್ದಂತೆಯೇ ನೊಂದ ಮಹಿಳೆಯರು ನಡುರಸ್ತೆಯಲ್ಲೇ ಹೇಮಾವತಿಯನ್ನು ಹಿಡಿದು ಎಳೆದಾಡಿ ಥಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.







