ಭೀಮಾ ಕೋರೆಗಾಂವ್ ಶೋಷಣೆ, ಅಸ್ಪೃಶ್ಯತೆ ವಿರುದ್ಧದ ಹೋರಾಟ : ಭೀಮ್ ರಾವ್ ವೈ.ಅಂಬೇಡ್ಕರ್

ಹಾಸನ : ಭೀಮಾ ಕೋರೆಗಾಂವ್ ಯುದ್ಧವಲ್ಲ, ಅದು ಶೋಷಣೆ, ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ನಡೆದ ಶಾಶ್ವತ ಆತ್ಮಗೌರವದ ಹೋರಾಟ ಎಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ, ಭಾರತೀಯ ಬೌದ್ಧ ಮಹಾ ಸಭಾ (ಮುಂಬೈ)ದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಭೀಮ್ ರಾವ್ ವೈ.ಅಂಬೇಡ್ಕರ್ ಹೇಳಿದ್ದಾರೆ.
ಹಾಸನ ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ 208ನೇ ಭೀಮಾ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಕೇವಲ ಯುದ್ಧದ ವಿಜಯೋತ್ಸವವಾಗಿ ನೋಡಬಾರದು. ಅದು ಶೋಷಣೆ, ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ನಡೆದ ಆತ್ಮಗೌರವದ ಹೋರಾಟದ ಸಂಕೇತವಾಗಿದೆ. ಗೌರವಕ್ಕಾಗಿ, ಹಕ್ಕುಗಳಿಗಾಗಿ, ಸಂವಿಧಾನದ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಹೋರಾಟ ಇದಾಗಿದೆ. ಡಾ.ಅಂಬೇಡ್ಕರ್ ನಮಗೆ ಕೊಟ್ಟ ಮಹಾಮಂತ್ರವೇ ‘ಶಿಕ್ಷಣ ಪಡೆಯಿರಿ, ಸಂಘಟಿತರಾಗಿರಿ, ಹೋರಾಡಿರಿ’. 2020ರ ನಂತರ ಕೇಂದ್ರ ಹಾಗೂ ಕೆಲವು ರಾಜ್ಯ ಸರಕಾರಗಳ ನೀತಿಗಳಿಂದಾಗಿ ಸಂವಿಧಾನಾತ್ಮಕ ಹಕ್ಕುಗಳು ದುರ್ಬಲಗೊಳ್ಳುತ್ತಿವೆ ಎಂದರು.
ಮೀಸಲಾತಿ ನೀತಿಯ ಸರಿಯಾದ ಅನುಷ್ಠಾನವಾಗುತ್ತಿಲ್ಲ. ಸರಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ಹೇಳಿದರು.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗ ಜನರಿಗೆ ಭೀಮಾ ಕೋರೆಗಾಂವ್ ಇತಿಹಾಸ ತಿಳಿಯತೊಡಗಿದೆ. ಇದು ನಮ್ಮ ಸಮುದಾಯದ ಇತಿಹಾಸ ಮಾತ್ರವಲ್ಲ, ಸಮಾನತೆ, ನ್ಯಾಯ ಮತ್ತುಮಾನವೀಯ ಗೌರವಕ್ಕಾಗಿ ನಡೆದ ಹೋರಾಟದ ಇತಿಹಾಸ. ಈ ಸತ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.
ನಿವೃತ್ತ ಡಿಸಿಪಿ ಎಸ್.ಸಿದ್ದರಾಜು, ಸಂಸದ ಶ್ರೇಯಸ್ ಪಟೇಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ದಲಿತ ಮುಖಂಡ ಸಂದೇಶ್ ವಹಿಸಿದ್ದರು, ಪ್ರಾಸ್ತಾವಿಕ ಭಾಷಣ ದಲಿತ ಮುಖಂಡ ಅಂಬುಗ ಮಲ್ಲೇಶ್ ನೆರವೇರಿಸಿದರು. ಪತ್ರಕರ್ತ ಹೆತ್ತೂರು ನಾಗರಾಜ್ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ನಗರದ ರೈಲು ನಿಲ್ದಾಣದಿಂದ ಡಿಸಿ ಕಚೇರಿಯವರೆಗೆ ಭೀಮಾ ಕೋರೆಗಾಂವ್ ವಿಜಯ ಸ್ತಂಭದ ಬೃಹತ್ ಮೆರವಣಿಗೆ ನಡೆಯಿತು. ಡಿಸಿ ಕಚೇರಿ ಮುಂಭಾಗದ ಡಬಲ್ ರೋಡ್ (ಪ್ರಜಾಸೌಧಹತ್ತಿರ)ದಲ್ಲಿ ಸಾರ್ವಜನಿಕ ಸಮಾವೇಶ ನಡೆಯಿತು.
ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಕಾರ್ಮಿಕ ಹಾಗೂ ಮಹಿಳಾ ಸಂಘಟನೆಗಳ ಒಗ್ಗೂಡಿಕೆ ಈ ಕಾರ್ಯಕ್ರಮದ ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಭಾರತೀಯ ಭೌದ್ಧ ಮಹಾಸಭಾ (ರಿ.) ಹಾಗೂ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿ, ಹಾಸನ ಸಂಯುಕ್ತವಾಗಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷೆ ಡಿ. ಶಿವಮ್ಮ, ಪ್ರಧಾನ ಕಾರ್ಯದರ್ಶಿ ಮಂಜು ತೇಜೂರು, ಹಣಕಾಸು ಸಮಿತಿ ಸದಸ್ಯ ಮಲ್ಲೇಶ್ ಅಂಬುಗ, ಸಮಿತಿ ಸದಸ್ಯರಾದ ಎಚ್.ಜೆ. ಉಮೇಶ್ ಹಾಚಗೋಡನಹಳ್ಳಿ, ಭಾಗ್ಯ ಕಲಿವೀರ್, ತೋಟೇಶ್ ನಿಟ್ಟೂರು, ರಾಮು ನರಸಿನಕುಪ್ಪೆ, ಕೃಷ್ಣದಾಸ್ , ರಾಜಶೇಖರ್ ಹುಲಿಕಲ್, ವೈಚಾರಿಕ ಪತ್ರಿಕೆಯ ಸಂಪಾದಕ ವೆಂಕಟೇಶ್ ಬ್ಯಾಕರವಳ್ಳಿ, ರಾಜು ಗೊರೂರು ಅನೇಕರು ಕಾರ್ಯಕ್ರಮದಲ್ಲಿ ಇದ್ದರು.







