ಮಧ್ಯರಾತ್ರಿ ಸಕಲೇಶಪುರ ಆಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ

ಸಕಲೇಶಪುರ : ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಇಲ್ಲಿನ ಕ್ರಾಫರ್ಡ್ ಸರಕಾರಿ ಆಸ್ಪತ್ರೆಗೆ ಮಧ್ಯರಾತ್ರಿ ಭೇಟಿ ನೀಡಿ, ನಸುಕಿನ 2:30ರ ವರೆಗೆ ಸುದೀರ್ಘ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ರಾತ್ರಿ ಸುಮಾರು 11:47ಕ್ಕೆ ಆಸ್ಪತ್ರೆ ಆವರಣಕ್ಕೆ ಆಗಮಿಸಿದ ಸಚಿವರು, ಮೊದಲು ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಕ್ಷೇಮ ಸಮಾಚಾರ ವಿಚಾರಿಸಿದರು. ತದನಂತರ 11:55ಕ್ಕೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸತತ ಎರಡೂವರೆ ಗಂಟೆಗಳ ಕಾಲ ಆಸ್ಪತ್ರೆಯ ಸ್ಥಿತಿಗತಿಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಹಾಗೂ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಸಚಿವರಿಗೆ ಸಾಥ್ ನೀಡಿದರು.
ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ:
ಆಸ್ಪತ್ರೆಯ ಪ್ರಮುಖ ಅಂಗವಾಗಿರುವ ಡಿ-ಗ್ರೂಪ್ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಹಾಗೂ ಪಿ.ಎಫ್. ಸೌಲಭ್ಯ ನೀಡದ ಗುತ್ತಿಗೆ ಸಂಸ್ಥೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಂತಹ ಗುತ್ತಿಗೆದಾರರ ಮೇಲೆ ತಕ್ಷಣವೇ ಕ್ರಿಮಿನಲ್ ಮುಖದ್ದಮೆ ದಾಖಲಿಸಿ, ಅವರ ಗುತ್ತಿಗೆಯನ್ನು ರದ್ದುಗೊಳಿಸಿ ಕಪ್ಪು ಪಟ್ಟಿಗೆ (ಬ್ಲಾಕ್ ಲಿಸ್ಟ್) ಸೇರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೊರಗಿನ ಔಷಧಿ ಚೀಟಿಗೆ ನಿಷೇಧ:
ಯಾವುದೇ ಕಾರಣಕ್ಕೂ ಬಡ ರೋಗಿಗಳಿಗೆ ಹೊರಗಿನಿಂದ ಔಷಧಿಗಳನ್ನು ಖರೀದಿಸುವಂತೆ ವೈದ್ಯರು ಚೀಟಿ ಬರೆದುಕೊಡಬಾರದು. ಅಗತ್ಯ ಔಷಧಿಗಳನ್ನು ಆಸ್ಪತ್ರೆಯ ನಿಧಿಯಿಂದಲೇ ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕು ಎಂದು ವೈದ್ಯಾಧಿಕಾರಿ ಡಾ.ಅರುಣ್ ಅವರಿಗೆ ತಾಕೀತು ಮಾಡಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ 'ಆರೋಗ್ಯ ಮಿತ್ರ' ಯೋಜನೆಯಡಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಮತ್ತು ಈ ಬಗ್ಗೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.
ಸಕಲೇಶಪುರವು ಗುಡ್ಡಗಾಡು ಹಾಗೂ ಕಾಡಂಚಿನ ಪ್ರದೇಶವಾಗಿರುವುದರಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ವಿಶೇಷ ವೇತನ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.
ವೈದ್ಯರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯ ಮೂಳೆ ತಜ್ಞ ಡಾ.ಕಿಣಿ ಅವರಿಗೆ 'ಜನಸ್ಪಂದನ ವೇದಿಕೆ' ಹಾಗೂ ನಾಗರಿಕರ ಪರವಾಗಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಆಸ್ಪತ್ರೆಯ ಸ್ಕ್ಯಾನಿಂಗ್ ಮಿಷನ್, ಔಷಧಿ ವಿತರಣೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಅಂಬುಲೆನ್ಸ್ ಹಾಗೂ ಸ್ಟಾಫ್ ನರ್ಸ್ ಕೊರತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಜಿಲ್ಲಾ ವೈದ್ಯಾಧಿಕಾರಿಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಪೀಜ್, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಸುಕಿನ 2:15 ರವರೆಗೆ ಪರಿಶೀಲನೆ ನಡೆಸಿದ ಸಚಿವರು, 2:30ಕ್ಕೆ ಹಾಸನದತ್ತ ಪ್ರಯಾಣ ಬೆಳೆಸಿದರು.






