ಹಾಸನಾಂಬೆ ದೇವಾಲಯದ ಅಭಿವೃದ್ಧಿಗೆ ಸಮಗ್ರ ಯೋಜನೆ; ಜಿಲ್ಲಾಡಳಿತದಿಂದ ವರದಿ ತರಿಸಿ ನಿರ್ಧಾರ: ಡಿಕೆಶಿ

ಹಾಸನ : ಐತಿಹಾಸಿಕ ಹಾಸನಾಂಬೆ ದೇವಾಲಯಕ್ಕೆ ಪ್ರತೀವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಭವಿಷ್ಯದಲ್ಲಿ ಭಕ್ತರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಹಾಗೂ ಹಾಸನಾಂಬೆ ಕಾರಿಡಾರ್ ನಿರ್ಮಿಸುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರವಿವಾರ ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವಾಲಯಕ್ಕೆ ಸಂಬಂಧಿಸಿದ ಜಾಗದ ವಿಚಾರದಲ್ಲಿ ಕಟ್ಟಡ ಮಾಲಕರಿಗೆ ತೊಂದರೆ ನೀಡುವ ಉದ್ದೇಶ ಸರಕಾರಕ್ಕಿಲ್ಲ. ಎಲ್ಲರನ್ನೂ ಕರೆದು ಚರ್ಚಿಸಿ, ಕಾನೂನುಬದ್ಧವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡುತ್ತೇನೆ ಎಂದು ಅವರು ತಿಳಿಸಿದರು.
ದೇವಾಲಯದ ಅಭಿವೃದ್ಧಿ, ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುವುದು, ರಾಜಗೋಪುರದ ಮೂಲಕ ಭಕ್ತರ ಪ್ರವೇಶಕ್ಕೆ ಅವಕಾಶ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದರು.
ಪ್ರತಿವರ್ಷ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹನ್ನೊಂದು ದಿನಗಳ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಜನರು ಬಂದು ತಮ್ಮ ಇಷ್ಟಾರ್ಥಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಹೋಗುವ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ಆಡಳಿತದ ಜವಾಬ್ದಾರಿ ಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಸಹಿತ ಹಲವು ಗಣ್ಯರು ಪಾಲ್ಗೊಂಡರು. ಹಾಸನಾಂಬ ಜಾತ್ರೆಯ ಧಾರ್ಮಿಕ ಸಂಭ್ರಮದ ಜತೆಗೆ ಕ್ರೀಡಾ ಚಟುವಟಿಕೆಗಳೂ ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು.






