ರಾಜ್ಯದಲ್ಲಿ ಎರಡು ಕೆಮ್ಮಿನ ಸಿರಪ್ ಮಾದರಿಗಳಲ್ಲಿ ಅಸಾಮಾನ್ಯ ಅಂಶಗಳು ಪತ್ತೆ: ದಿನೇಶ್ ಗುಂಡೂರಾವ್

ಹಾಸನ, ಅ.6: ರಾಜ್ಯದಲ್ಲಿ ಎರಡು ಕಾಫ್ ಸಿರಪ್ ಮಾದರಿಗಳಲ್ಲಿ ಅಸಾಮಾನ್ಯ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಮದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲೂ ಈಗ ಎರಡು ಸಿರಫ್ ಮಾದರಿಗಳಲ್ಲಿ ಅಸಾಮಾನ್ಯ ಅಂಶಗಳು ಪತ್ತೆಯಾಗಿವೆ. ಇಂದು ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತಿದೆ. ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಸ್ಪಷ್ಟ ಸೂಚನೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕೆಮ್ಮಿನ ಸಿರಫ್ ತಯಾರಿಸುವ ವಿವಿಧ ಕಂಪನಿಗಳ ಮಾದರಿಗಳನ್ನೂ ಸಂಗ್ರಹಿಸಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಒಂದೆರಡು ದಿನಗಳಲ್ಲಿ ಅದರ ವರದಿ ಬರಲಿದೆ. ರಾಜ್ಯದಲ್ಲಿ ಯಾವುದೇ ರೀತಿಯ ಅಸುರಕ್ಷಿತ ಔಷಧ ಮಾರುಕಟ್ಟೆಗೆ ಬಾರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ:
ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಕಾಫ್ ಸಿರಫ್ ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅನಾಹುತ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಆರೋಗ್ಯ ಸಚಿವರು, ಔಷಧಿ ತಯಾರಿಕಾ ಘಟಕಗಳ ಬೇಜವಾಬ್ದಾರಿಯಿಂದಾಗಿ ತಮಿಳುನಾಡು, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ಪುದುಚೆರಿ ಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದರು.
ಪೋಷಕರು ಎಚ್ಚರಿಕೆ ವಹಿಸಬೇಕು:
ರಾಜ್ಯದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಫ್ ಕುಡಿಸುವಾಗಲೂ ಪೋಷಕರು ಬಹಳ ಎಚ್ಚರಿಕೆ ವಹಿಸಬೇಕು. ಕಾಫ್ ಸಿರಫ್ ಸೇವನೆ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
ಕೇಂದ್ರಕ್ಕೆ ಪತ್ರ ಬರೆದಿದ್ದೆ:
ಕೆಲ ಔಷಧಿಗಳ ಕಲಬೆರಕೆ, ನಕಲಿ ಔಷಧಿ ಮತ್ತು ತಪಾಸಣೆ ಕುರಿತಂತೆ ಈ ಹಿಂದೆಯೇ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೆ. ಯಾವುದೇ ಡ್ರಗ್ಸ್ ಕಲಬೆರಕೆ ಎಂದು ಗೊತ್ತಾದಲ್ಲಿ ತ್ವರಿತವಾಗಿ ದೇಶಾದ್ಯಂತ ಮಾಹಿತಿ ರವಾನೆ-ವಿನಿಮಯಕ್ಕೆ ಪ್ರತ್ಯೇಕ ʼವೆಬ್ ಸೈಟ್ʼ ರಚಿಸುವಂತೆ ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದಿದ್ದೆ. ಔಷಧಿಗಳ ಕಲಬೆರಿಕೆ ವಿಚಾರದಲ್ಲಿ ಕೇಂದ್ರ ಸರಕಾರ ಕಠಿಣ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಅಲ್ಲದೇ ರಾಜ್ಯ ರಾಜ್ಯಗಳ ನಡುವೆ ಮಾಹಿತಿ ಸಿಗುವಂತಹ ವ್ಯವಸ್ಥೆ ಜಾರಿಗೆ ತರುವತ್ತ ಕೇಂದ್ರ ಸರಕಾರ ಮುಂದಾಗಬೇಕು ಎಂದು ಆರೋಗ್ಯ ಸಚಿವ ಗುಂಡೂರಾವ್ ಹೇಳಿದರು.
‘ತಮಿಳುನಾಡಿನ ಕಾಂಚೀಪುರಂ ಮೂಲದ ಶ್ರೀಸನ್ ಫಾರ್ಮಾ ತಯಾರಿಸಿದ ‘ಕೋಲ್ಡ್ರಿಫ್ ಸಿರಪ್' ಮತ್ತು ಜೈಪುರದ ಕೇಸನ್ಸ್ ಫಾರ್ಮಾ ತಯಾರಿಸಿದ ‘ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಸಿರಪ್'ಗಳ ಮಾರಾಟ ಮತ್ತು ಖರೀದಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು, ವೈದ್ಯಕೀಯ ಸಂಸ್ಥೆಗಳು, ಸರಕಾರಿ ಆಸ್ಪತ್ರೆಗಳು, ಔಷಧ ಸಂಗ್ರಹಕಾರರು, ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಈ ಕೆಮ್ಮಿನ ಸಿರಪ್‍ಗಳ ಖರೀದಿ ಮತ್ತು ಮಾರಾಟ ಮಾಡಬಾರದು’ ಎಂದು ಸರಕಾರ ಎಚ್ಚರಿಕೆ ನೀಡಿದೆ.







