ಅರಸೀಕೆರೆ | ಪ್ರಸಾದ ಸೇವಿಸಿದ್ದ 50ಕ್ಕೂ ಅಧಿಕ ಮಂದಿ ಅಸ್ವಸ್ಥ

ಅರಸೀಕೆರೆ : ದೇವಾಲಯದ ಜಾತ್ರಾ ಮಹೋತ್ಸವ ವೇಳೆ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥರಾಗಿರುವ ಘಟನೆ ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಖಾಸಗಿ-ಸಂಘ ಸಂಸ್ಥೆಯಿಂದ ವಿತರಿಸಿದ್ದ ಪ್ರಸಾದ ಸೇವಿಸಿ 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ವೆಂಕಟರಮಣ ಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಪ್ರಸಾದ ವಿತರಣೆ ಮಾಡಲಾಗಿತ್ತು.
ದೇಗುಲದ ಹೊರಗೆ ಖಾಸಗಿ ಸಂಸ್ಥೆಯವರು ಮೊಸರನ್ನ ಹಾಗೂ ಬಿಸಿಬೇಳೆ ಬಾತ್ ವಿತರಣೆ ಮಾಡಿದ್ದರು. ರವಿವಾರ ರಾತ್ರಿ 7.30ರಲ್ಲಿ ಸುಮಾರು ಒಂದೂವರೆ ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಗಿತ್ತು. ಪ್ರಸಾದ ಸೇವಿಸಿದ ಬಳಿಕ ರಾತ್ರಿ ಹಾಗೂ ಸೋಮವಾರ ಮುಂಜಾನೆ ಹಲವರಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಕೂಡಲೇ ಅಸ್ವಸ್ಥರಾದವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 30ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ಮುಂದುವರೆದಿದೆ, ಉಳಿದವರು ಬಿಡುಗಡೆ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಭಕ್ತರು ಸೇವಿಸಿದ್ದ ಪ್ರಸಾದದ ಮಾದರಿ ಸಂಗ್ರಹಿಸಿರುವ ತಾಲೂಕು ಆಡಳಿತ ಪರೀಕ್ಷೆಗೆ ಕಳಿಸಿದೆ. ತಕ್ಷಣವೇ ಚಿಕಿತ್ಸೆ ಸಿಕ್ಕಿದ್ದರಿಂದ ಎಲ್ಲ ಭಕ್ತರು ಅಪಾಯದಿಂದ ಪಾರಾಗಿದ್ದಾರೆ.





