ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆಯಿದೆ : ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ
ಹಾಸನ : ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆಯಿದೆ, ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆಗಳೇನು ಎಂದು ಅವರು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರ ಕೊಡುಗೆಯ ಬಗ್ಗೆ ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅಹಿಂದ ವರ್ಗಗಳ ಸಂಘಟನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದು, ಅವರಿಗೆ ಗ್ಯಾರಂಟಿ ಹಾಗೂ ಅನೇಕ ಭಾಗ್ಯಯೋಜನೆಗಳನ್ನು ನೀಡಿದ್ದೇವೆ. ಕಾರ್ಮಿಕರು, ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಸೇರಿದಂತೆ ಅನೇಕ ಯೋಜನೆಗಳಿಂದ ಅನುಕೂಲವಾಗಿದೆ. ಕುಮಾರಸ್ವಾಮಿಯವರು ರೈತರ ಕುಟುಂಬದವರೇ ಹೊರತು, ರೈತವರ್ಗಕ್ಕೆ ಅವರ ಕೊಡುಗೆಗಳೇನಿದೆ? ಎಂದು ಪ್ರಶ್ನಿಸಿದರು.
ಜಿಎಸ್ ಟಿ ಸಂಗ್ರಹದಲ್ಲಿ ನಷ್ಟ :
ಸೆಪ್ಟೆಂಬರ್ನಿಂದ ನವೆಂಬರ್ 2025ರವೆಗೆ ಕರ್ನಾಟಕಕ್ಕೆ ಜಿಎಸ್ಟಿ ಸಂಗ್ರಹದಲ್ಲಿ ನಷ್ಟವಾಗಿದೆ. 2017 ರಲ್ಲಿ ಪ್ರಧಾನಿ ಮೋದಿಯವರು ಜಿಎಸ್ ಟಿ ಜಾರಿಗೆ ತಂದು, ಅಂದಿನಿಂದಲೂ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈಗ ಆರ್ಥಿಕ ವರ್ಷದ ಮಧ್ಯದಲ್ಲಿಯೇ ಜಿಎಸ್ ಟಿ ದರವನ್ನು ಕಡಿಮೆ ಮಾಡಿದ ಪರಿಣಾಮ, ರಾಜ್ಯ ಸರಕಾರಗಳಿಗೆ ಜಿಎಸ್ ಟಿ ಸಂಗ್ರಹದಲ್ಲಿ ನಷ್ಟವಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಕೊರತೆ ಕಂಡಿದೆ ಎಂದರು.
ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡದೇ ಮಂಡ್ಯ ಜನರಿಗೆ ಅನ್ಯಾಯ :
ಜಿಎಸ್ ಟಿ ದರ ಕಡಿತದಿಂದ ರಾಜ್ಯಕ್ಕಾಗಿರುವ ನಷ್ಟದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯರು ಇದುವರೆಗೂ ಧ್ವನಿ ಎತ್ತಿರುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ವಿತ್ತಸಚಿವರು 5300 ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ಘೋಷಣೆಯಲ್ಲಿ ಹಿಂದಿನ ಸರಕಾರದವರು ತಮ್ಮ ಆಯವ್ಯಯದಲ್ಲಿಯೂ ಉಲ್ಲೇಖಿಸಿದರು. ಆದರೆ ಇದುವರೆಗೆ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಿಲ್ಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರಕಾರದ ಅಧೀನದಲ್ಲಿದ್ದು, ರಾಜ್ಯದ ಪ್ರಮುಖ ಯೋಜನೆಗೆ ಇದುವರೆಗೆ ಅನುಮತಿ ದೊರೆತಿಲ್ಲ. ಇದರಿಂದ ಮಂಡ್ಯ ಜನರಿಗೆ ಅನ್ಯಾಯವಾಗಿದೆ ಎಂದರು.
ನಮ್ಮ ಸರಕಾರ ತೆರೆದ ಪುಸ್ತಕ ಇದ್ದಂತೆ :
ವಿರೋಧ ಪಕ್ಷಗಳನ್ನು ಅವಿಶ್ವಾಸ ನಿರ್ಣಯ ತರಲಿ, ನಾವು ಎದುರಿಸಲು ತಯಾರಿದ್ದೇವೆ. ನಾವು ತೆರೆದ ಪುಸ್ತಕ ಇದ್ದಂತೆ. ನಮ್ಮದು ಪಾರದರ್ಶಕ ಸರಕಾರ. ಎಲ್ಲವನ್ನು ಎದುರಿಸಲು ತಯಾರಿದ್ದೇವೆ ಎಂದರು.
ಹೈಕಮಾಂಡ್ ಸೂಚನೆಗೆ ಬದ್ಧ :
ನವೆಂಬರ್ ಕ್ರಾಂತಿಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ವರಿಷ್ಠರು ನಿರ್ಧಾರ ಮಾಡಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.







