ಆಲೂರು: 2 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

ಆಲೂರು: ಪಟ್ಟಣದ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಎರಡು ವರ್ಷದ ಮಗುವನ್ನು ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಮೃತರನ್ನು ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಅನುಶ್ರೀ (27) ಹಾಗೂ ಅವರ ಪುತ್ರ ಆರ್ಯನ್ (2) ಎಂದು ಗುರುತಿಸಲಾಗಿದೆ.
ಅನುಶ್ರೀ ಮತ್ತು ಶ್ರೀನಿವಾಸ್ ಸುಮಾರು ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ತಮ್ಮ ಮಗುವಿನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಎರಡು ತಿಂಗಳ ಹಿಂದೆ ಆಲೂರಿಗೆ ಬಂದು ಹೌಸಿಂಗ್ ಬೋರ್ಡ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಬುಧವಾರ ಅನುಶ್ರೀ ಅವರು ತಮ್ಮ ಎರಡು ವರ್ಷದ ಮಗ ಆರ್ಯನ್‌ನನ್ನು ಕೊಂದು, ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




