Belur | ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಅವಘಡ: ಆಳಕ್ಕೆ ಬಿದ್ದ ಬೈಕ್; ಇಬ್ಬರಿಗೆ ಗಾಯ

ಬೇಲೂರು : ಪಟ್ಟಣದ ಜೆ.ಪಿ.ನಗರದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಅವಘಡವೊಂದು ಸಂಭವಿಸಿದ್ದು, ಬೈಕ್ ಸಮೇತ ಇಬ್ಬರು ಯುವಕರು ಆಳವಾದ ತಗ್ಗಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಗೊಂಡವರನ್ನು ಮೂಡಿಗೆರೆ ಮೂಲದ 26 ವರ್ಷದ ಗ್ಲೇನ್ ಹಾಗೂ ಮುತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ಇಬ್ಬರೂ ಇಂಜಿನಿಯರ್ ಗಳಾಗಿದ್ದು, ಮೂಡಿಗೆರೆ ಯಿಂದ ಬೆಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೆಳಗಿನ ಜಾವ ಸುಮಾರು 5.45 ರ ವೇಳೆಗೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದು, ತುರ್ತು ಸಹಾಯವಾಣಿ 112 ಗೆ ಮಾಹಿತಿ ನೀಡಿದ್ದಾರೆ.ಬಳಿಕ ಸ್ಥಳಕ್ಕೆಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಏಣಿ, ಹಗ್ಗ ಹಾಗೂ ಕ್ರೇನ್ ನೆರವಿನಿಂದ ಕಾರ್ಯಾಚರಣೆ ನಡೆಸಿ ಬೈಕ್ ಅನ್ನು ತಗ್ಗಿನಿಂದ ಮೇಲಕ್ಕೆತ್ತಿದ್ದಾರೆ.
ಸ್ಥಳೀಯರಾದ ಲೋಕೇಶ್ ಹಾಗೂ ಜಗದೀಶ್ ಮಾತನಾಡಿ, ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಸಮರ್ಪಕ ಸುರಕ್ಷತಾ ವ್ಯವಸ್ಥೆ ಇಲ್ಲ. ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಸೂಚನಾ ಫಲಕ, ಬ್ಯಾರಿಕೇಡ್ ಹಾಗೂ ವೇಗ ನಿಯಂತ್ರಣದ ಹಂಪ್ ಗಳನ್ನು ಅಳವಡಿಸಿಲ್ಲ. ಇಂತಹ ನಿರ್ಲಕ್ಷ್ಯದಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗಿದೆ. ಘಟನೆ ಸಂಭವಿಸಿದರೂ ರೈಲ್ವೆ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.






