ಬಿಇಓ ರಾಜೇಗೌಡಗೆ ಅವಾಚ್ಯ ಪದಗಳಿಂದ ನಿಂದಿಸಿದ ಬೇಲೂರು ಶಾಸಕ ಎಚ್.ಕೆ.ಸುರೇಶ್ ?

ಬೇಲೂರು : ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ 17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಶಾಸಕ ಎಚ್.ಕೆ.ಸುರೇಶ್, ಬಿಇಓ ರಾಜೇಗೌಡರಿಗೆ ನನ್ನ ಹೆಸರು ಹಾಕದೇ ಯಾಕೆ ಕರೆದೆ ಎಂದು ಅವಾಚ್ಯ ಶಬ್ದ ಬಳಸಿ ನಿಂದಿಸಿರುವ ಘಟನೆ ಬೇಲೂರಿನ ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದಿರುವುದು ವರದಿಯಾಗಿದೆ.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು ಆಯೋಜನೆಗೊಂಡಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಚ್.ಕೆ.ಸುರೇಶ್ ಹಾಗೂ ಬಿಇಓ ರಾಜೇಗೌಡರ ನಡುವೆ ವಾಗ್ವಾದ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಚ್.ಕೆ.ಸುರೇಶ್ ʼಎ ಏಳೋ ಮೇಲೆ ನನ್ನ ಪಕ್ಕ ನೀನು ಕೂರಬೇಡʼ ಎಂದರು. ಈ ವೇಳೆ ʼನಾನು ಈ ತಾಲ್ಲೂಕಿನ ಬಿಇಓ ನಾನೇಕೆ ಏಳಲಿʼ ಎಂದು ವಾಗ್ವಾದಕ್ಕೆ ಇಳಿದರು. ಅಲ್ಲೇ ಇದ್ದ ಶಿಕ್ಷಕರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ಕಾರ್ಯಕ್ರಮದ ವೇದಿಕೆಯಿಂದ ಹೊರನಡೆಯಲು ಹೋದಾಗ ಕೆಲ ಶಿಕ್ಷಕರು ʼಇದು ಮಕ್ಕಳ ಕಾರ್ಯಕ್ರಮ ಹಾಳು ಮಾಡಬೇಡಿʼ ಎಂದು ಕೇಳಿಕೊಂಡರು.
ಶಾಸಕರು ಮತ್ತು ಬಿಇಓ ನಡುವಿನ ಈ ಜಗಳದಿಂದ ಬಿಸಿಲಿನ ತಾಪದಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದರು.







