Belur | ಬೋರ್‌ವೆಲ್ ಕೇಬಲ್ ಕಳ್ಳತನ: ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಬೇಲೂರು: ಬೋರ್‌ವೆಲ್‌ಗಳ ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಹಿಡಿದ ಗ್ರಾಮಸ್ಥರು, ಅವರಿಗೆ ಹಲ್ಲೆ ನಡೆಸಿದ ಬಳಿಕ ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣದ ಹೊರವಲಯದ ರಾಯಪುರ ಗ್ರಾಮದಲ್ಲಿ ವರದಿಯಾಗಿದೆ.
ರಾಯಪುರ ಗ್ರಾಮದ ಸುತ್ತಮುತ್ತ ಕಳೆದ ಎರಡು-ಮೂರು ತಿಂಗಳಿಂದ ರೈತರು ತಮ್ಮ ಜಮೀನುಗಳಿಗೆ ನೀರು ಹರಿಸಲು ಅಳವಡಿಸಿದ್ದ ಬೋರ್‌ವೆಲ್‌ಗಳ ಕೇಬಲ್‌ಗಳು ಕಳ್ಳತನವಾಗುತ್ತಿದ್ದವು. ವಿದ್ಯುತ್ ಸಂಪರ್ಕ ಕಡಿತಗೊಂಡ ಸಮಯದಲ್ಲಿ ಕಲ್ಲಿನಿಂದ ಕೇಬಲ್‌ಗಳನ್ನು ತುಂಡರಿಸಿ ಕಳ್ಳತನ ಮಾಡಲಾಗುತ್ತಿತ್ತು. ಕೆಲವೆಡೆ ಮೋಟರ್‌ಗಳನ್ನು ಕಳವು ಮಾಡುತ್ತಿದ್ದರೆ, ಇನ್ನು ಕೆಲವೆಡೆ ಮೋಟರ್‌ಗಳನ್ನು ಕೆಳಕ್ಕೆ ಬೀಳಿಸಿ ಹೋಗುತ್ತಿದ್ದರು. ಇದರಿಂದ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿತ್ತು.
ಶುಕ್ರವಾರ ಬೆಳಗ್ಗೆ ಕೇಬಲ್ ಕಳವು ಮಾಡಿಕೊಂಡು ಹೋಗುತ್ತಿದ್ದ ಇಬ್ಬರನ್ನು ಗಮನಿಸಿದ ಗ್ರಾಮಸ್ಥರು ಬೆನ್ನಟ್ಟಿ ಹಿಡಿದಿದ್ದಾರೆ. ನಿರಂತರ ಕಳ್ಳತನದಿಂದ ಬೇಸತ್ತಿದ್ದ ರೈತರು ಆಕ್ರೋಶಗೊಂಡು ಇಬ್ಬರಿಗೆ ಹಲ್ಲೆ ನಡೆಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳ ಹೆಸರು ಹಾಗೂ ಕಳವು ಮಾಡುತ್ತಿದ್ದ ಕೇಬಲ್‌ಗಳನ್ನು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.




