ʼಲಕ್ಷಾಂತರ ಮಹಿಳೆಯರಿಗೆ ಲಾಭʼ : ಶಕ್ತಿ ಯೋಜನೆಗೆ ಬಿಜೆಪಿ ಶಾಸಕ ಎಚ್.ಕೆ.ಸುರೇಶ್ ಶ್ಲಾಘನೆ

ಬೇಲೂರು : ರಾಜ್ಯ ಬಿಜೆಪಿ ನಾಯಕರು, ಮುಖಂಡರು ಗ್ಯಾರಂಟಿ ಯೋಜನೆಗಳ ವಿರುದ್ಧ ಟೀಕೆ ಮಾಡುತ್ತಿರುವ ನಡುವೆಯೇ, ಬೇಲೂರು ಬಿಜೆಪಿ ಶಾಸಕ ಎಚ್.ಕೆ.ಸುರೇಶ್ ʼಶಕ್ತಿ ಯೋಜನೆʼಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಶಕ್ತಿ ಯೋಜನೆ 500 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣ ದಾಟಿದ ಸಾಧನೆಗೆ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಉಚಿತ ಬಸ್ ಪ್ರಯಾಣದ ಸದುಪಯೋಗ ಪಡೆದುಕೊಂಡಿದ್ದಾರೆ. ಇದು ಮಹಿಳಾ ಸಬಲೀಕರಣದ ಹೆಜ್ಜೆ. ಈ ನಿರ್ಧಾರ ಶ್ಲಾಘನೀಯ” ಎಂದರು.
“ಈ ಹಿಂದೆ ಇದೇ ಬಸ್ ನಿಲ್ದಾಣದಲ್ಲಿ 2022 ʼಶಕ್ತಿ ಯೋಜನೆʼ ಉದ್ಘಾಟನೆ ಮಾಡಿದ್ದೆ. ಆಗಲೂ ಸಹ ಸರಕಾರದ ನಿಲುವನ್ನು ಒಳ್ಳೆಯ ಕೆಲಸ ಎಂದು ಹೇಳಿದ್ದೆ. ಇಂದಿಗೆ ಸಾವಿರಾರು ಗ್ರಾಮೀಣ ಮಹಿಳೆಯರು ಧಾರ್ಮಿಕ ತಾಣಗಳಿಗೆ, ತಮ್ಮ ಅಗತ್ಯ ಕಾರ್ಯಗಳಿಗೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದು ಸಾಮಾಜಿಕ ಕ್ರಾಂತಿಯೆಂದು ಕರೆಯಬಹುದಾದ ಯೋಜನೆ” ಎಂದು ಅಭಿಪ್ರಾಯಪಟ್ಟರು.
ʼಇಂದು ರಾಜ್ಯದ ದೇವಸ್ಥಾನಗಳು ತುಂಬಿ ತುಳುಕುತ್ತಿದ್ದರೆ, ಅದಕ್ಕೆ ಶಕ್ತಿ ಯೋಜನೆಯೇ ಕಾರಣ. ಸ್ವಾಭಿಮಾನದಿಂದ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ, ಇದು ಹೆಮ್ಮೆಯ ವಿಚಾರʼ ಎಂದರು.
ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆನಂದ್ ದೇಶಾಣಿ ಮಾತನಾಡಿ, ʼಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ನೂತನ ದಿಕ್ಕು ನೀಡುತ್ತಿವೆʼ ಎಂದರು.
ಕಾರ್ಯಕ್ರಮದಲ್ಲಿ ಸೈಯದ್ ತೌಫಿಕ್, ಉಷಾ ಸತೀಶ್, ಬಿ.ಎಂ. ರಂಗನಾಥ್, ಚಂದ್ರಶೇಖರ್ ಬಿ.ಎನ್., ತೀರ್ಥಕುಮಾರಿ ವೆಂಕಟೇಶ್, ಸೌಮ್ಯ ಆನಂದ್, ಚೇತನ್ ಸಿ., ಶರತ್, ಅಶೋಕ್ ಡಿ.ಆರ್., ಸುರೇಶ್ ಬಿ.ಎಂ., ಪ್ರತಾಪ್ ಕೆ.ಸಿ., ಇಂದ್ರೇಶ್, ಮಹೇಶ್, ನಿಶ್ಚಲ್, ಮನ್ಸೂರ್ ಅಹಮದ್, ಅಬೀಬ್, ಚಂದ್ರಶೇಖರ್, ಧರ್ಮಬೋವಿ, ವಿಶಾಲಾಕ್ಷಿ ಹಾಗೂ ಇತರರು ಹಾಜರಿದ್ದರು.







