Channarayapatna | ಪುತ್ರನಿಂದಲೇ ತಂದೆಯ ಭೀಕರ ಹತ್ಯೆ

ಸತೀಶ್ (60)
ಹಾಸನ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪುತ್ರನೊಬ್ಬ ತಂದೆಯನ್ನು ಭೀಕರವಾಗಿ ಹತ್ಯೆಗೈದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸತೀಶ್ (60) ಎಂದು ಗುರುತಿಸಲಾಗಿದ್ದು, ಪುತ್ರ ರಂಜಿತ್ (28) ತಂದೆಯನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಕುಟುಂಬದಲ್ಲಿ ನಿರಂತರ ಕಲಹ ನಡೆಯುತ್ತಿತ್ತು. ಇದರಿಂದ ಬೇಸತ್ತ ರಂಜಿತ್ ಹಾಗೂ ಆತನ ತಾಯಿ ಪ್ರತ್ಯೇಕವಾಗಿ ಕೆ.ಆರ್.ನಗರದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಂದೆ-ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ನಿನ್ನೆ ರಾತ್ರಿ ಗಲಾಟೆ ತಾರಕಕ್ಕೇರಿದೆ. ಜಗಳದ ವೇಳೆ ರಂಜಿತ್ ರಾಡ್ನಿಂದ ತಂದೆಯ ತಲೆಗೆ ಹೊಡೆದು ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





