ನಮ್ಮದು ನುಡಿದಂತೆ ನಡೆದ ಸರಕಾರ; ಕೊಟ್ಟ ಮಾತಿನಂತೆ 142 ಭರವಸೆಗಳನ್ನು ಈಗಾಗಲೇ ಈಡೇರಿಸಿದೆ : ಡಿ.ಕೆ.ಶಿವಕುಮಾರ್

PC : x/@DKShivakumar
ಹಾಸನ : “ನಮ್ಮದು ನುಡಿದಂತೆ ನಡೆದ ಸರಕಾರ. ಕೊಟ್ಟ ಮಾತಿನಂತೆ 142 ಭರವಸೆಗಳನ್ನು ಈಗಾಗಲೇ ಈಡೇರಿಸಿದೆ. ನಮ್ಮ ಸರಕಾರದ ಸಾಧನೆಗಳಿಗೆ ಜನರ ಕಣ್ಣುಗಳೇ ಸಾಕ್ಷಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಹಾಸನದಲ್ಲಿ ಶನಿವಾರ ನಡೆದ ಸರಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
"ದೇವರು ವರ ಹಾಗೂ ಶಾಪ ಎರಡನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಈ ಅವಕಾಶದಲ್ಲಿ ಜನರ ಹೃದಯ ಗೆಲ್ಲಲು ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಿದ್ದೇವೆ. ಬೆಲೆ ಏರಿಕೆಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸಿದ್ದ ನಿಮಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಬಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ನಾವು ಪಕ್ಷಬೇಧ ಮಾಡದೆ ಯೋಜನೆ ನೀಡುತ್ತಿದ್ದೇವೆ" ಎಂದು ವಿವರಿಸಿದರು.
“ನಮ್ಮಯೋಜನೆಗಳ ಬಗ್ಗೆ ಕೆಲವರು ಟೀಕೆ ಮಾಡುತ್ತಾರೆ. ನಾನು ಅವರಿಗೆ ಉತ್ತರವಾಗಿ ಒಂದು ಉದಾಹರಣೆ ನೀಡುತ್ತೇನೆ. ಅಕ್ಬರ್ ಸತ್ಯಕ್ಕೂ ಸುಳ್ಳಿಗೂ ಇರುವ ಅಂತರವೆಷ್ಟು ಎಂದು ಕೇಳುತ್ತಾನೆ. ಅದಕ್ಕೆ ಬೀರ್ ಬಲ್, ಕೇವಲ ನಾಲ್ಕು ಬೆರಳುಗಳ ಅಂತರ ಸ್ವಾಮಿ, ಈ ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಈ ಕಣ್ಣು ಹಾಗೂ ಕಿವಿಯ ಮಧ್ಯೆ ಇರುವುದು ನಾಲ್ಕು ಬೆರಳಿನ ಅಂತರ ಎಂದು ವಿವರಿಸುತ್ತಾರೆ. ಹೀಗಾಗಿ ನಮ್ಮ ಸರಕಾರದ ಕೆಲಸಗಳನ್ನು ಜನರು ಕಣ್ಣಾರೆ ಕಾಣುತ್ತಿದ್ದಾರೆಯೇ ಹೊರತು ಕೇವಲ ಕಿವಿಯಲ್ಲಿ ಕೇಳುತ್ತಿಲ್ಲ” ಎಂದು ವಿವರಿಸಿದರು.
“ಇದು ಅಭಿವೃದ್ಧಿಯ ರಕಾರ. ಸರ್ವರಿಗೂ ಸಮಪಾಲು, ಸಮಬಾಳು, ಸರ್ವರಿಗೂ ನೆಮ್ಮದಿ, ಸರ್ವರಿಗೂ ಅಭಿವೃದ್ಧಿ ನೀಡುವ ಸರಕಾರ ನಮ್ಮದು. ನಾವು ಒಂದು ನಿಮಿಷದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಒಂದು ನಿಮಿಷದಲ್ಲಿ ಜನರ ಅಭಿವೃದ್ಧಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ನಾವು ಅದರಂತೆ ಕೆಲಸ ಮಾಡುತ್ತಿದ್ದೇವೆ” ಎಂದರು.
ಜನರ ಜೇಬಿಗೆ 1 ಲಕ್ಷ ಕೋಟಿ ಹಾಕಿದ್ದೇವೆ :
“ನಮ್ಮ ಸರಕಾರ ಗ್ಯಾರಂಟಿ ರೂಪದಲ್ಲಿ 1 ಲಕ್ಷ ಕೋಟಿ ಹಣವನ್ನು ಜನರ ಜೇಬಿಗೆ ಹಾಕಿದೆ. ರೈತರ ಪಂಪ್ ಸೆಟ್ ಗೆ ನೀಡಲಾಗುವ ಉಚಿತ ವಿದ್ಯುತ್ ಗೆ ಸರಕಾರ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಿಂಚಣಿ ಯೋಜನೆ, ಉಳುವವನಿಗೆ ಭೂಮಿ, ಅರಣ್ಯ ಭೂಮಿ ಸಕ್ರಮ ಸೇರಿದಂತೆ ಅನೇಕ ಯೋಜನೆ ನೀಡಿದೆವು. ಸಿಎಂ ಹಾಗೂ ನನ್ನ ಪಕ್ಷ ನನಗೆ ನೀರಾವರಿ ಇಲಾಖೆ ಜವಾಬ್ದಾರಿ ನೀಡಿದೆ. ಈ ಹಿಂದೆ ಹಾಸದ ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೆ ಈ ಇಬ್ಬರೂ ಹೆಣ್ಣುಮಕ್ಕಳಿಗೆ ನಾನು ಅಭಿನಂದನೆ ಸಲ್ಲಿಸಲೇ ಬೇಕು. ಇಂದು ಎತ್ತಿನಹೊಳೆ ನೀರು ಆಚೆ ಬರಲು ಈ ಇಬ್ಬರು ಅಧಿಕಾರಿಗಳು ಕೊಟ್ಟ ಸಹಕಾರ ಕಾರಣ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ” ಎಂದು ಶ್ಲಾಘಿಸಿದರು.
ಮೇಕೆದಾಟು, ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ:
“ಎತ್ತಿನಹೊಳೆ ನೀರನ್ನು ನಾವು ಆಚೆ ತಂದಿದ್ದೇವೆ. ಈ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ಕೆಲವು ತೊಡಕು ಎದುರಾಗಿದೆ. ಈ ಅಡಚಣೆ ಬಗೆಹರಿದ ಮೂರ್ನಾಲ್ಕು ತಿಂಗಳಲ್ಲಿ ತುಮಕೂರಿನವರೆಗೂ ಈ ನೀರನ್ನು ಹರಿಸಲಾಗುವುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಹೇಮಾವತಿ ನೀರು ಕೂಡ ಇದೆ. ನಾವೆಲ್ಲರೂ ಸೇರಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಮ್ಮ ನೀರು ನಮ್ಮ ಹಕ್ಕು ಎಂದು ಹೆಜ್ಜೆ ಹಾಕಿದೆವು. ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಮಾರ್ಗದರ್ಶನ ಹಾಗೂ ದಿಟ್ಟ ನಿರ್ಧಾರದಿಂದ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಿಕೊಟ್ಟಿದೆ. ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ತೀರ್ಮಾನವಾಗುವುದಿಲ್ಲ, ಇದರ ತಾಂತ್ರಿಕ ಅಂಶ ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ತೀರ್ಮಾನವಾಗಬೇಕು. ಹೀಗಾಗಿ ನ್ಯಾಯಾಲಯಕ್ಕೆ ಅಲೆಯಬೇಡಿ ಎಂದು ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ ಆದೇಶ ನೀಡಿದೆ. ನಿಮ್ಮೆಲ್ಲರ ಪರವಾಗಿ ನಾನು ಇಲ್ಲಿಂದಲೇ ಸುಪ್ರೀಂ ಕೋರ್ಟಿಗೆ ನಮಿಸುತ್ತೇನೆ” ಎಂದು ಹೇಳಿದರು.
ನಮ್ಮ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ
“ಮನುಷ್ಯನ ಬದುಕು ಶಾಶ್ವತವಲ್ಲ, ನಾವು ಬಿಟ್ಟು ಹೋಗುವ ಕೆಲಸಗಳು ಮಾತ್ರ ಶಾಶ್ವತ. ಕೃಷ್ಣ ಬೈರೇಗೌಡರ ಮುಖಂಡತ್ವದಲ್ಲಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ರಾಜ್ಯದಲ್ಲಿ ಶಾಶ್ವತವಾಗಿ ಉಳಿದಿದೆ. ಎಲ್ಲರಿಗೂ ತಮ್ಮ ಆಸ್ತಿ ದಾಖಲೆ ಭದ್ರಪಡಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಹಾಸನದಲ್ಲಿ ಅನೇಕ ಯೋಜನೆ ರೂಪಿಸುತ್ತಿದ್ದಾರೆ. "ನಮ್ಮ ಮಾತು ನಿಧಾನವಾಗಿರಬೇಕು, ಕಾಯಕ ಪ್ರಧಾನವಾಗಿರಬೇಕು" ಎಂದು ಹಿರಿಯರು ಹೇಳಿದ್ದಾರೆ ಎಂದರು.







