ಹಾಸನ | ಆಟವಾಡುತ್ತಾ ಟ್ರ್ಯಾಕ್ಟರ್ ಕೀ ಆನ್ ಮಾಡಿದ ಮಗು: ಚಕ್ರದಡಿಗೆ ಸಿಲುಕಿ ತಂದೆ ಮೃತ್ಯು

ಹಾಸನ: ಹೊಸ ಮನೆ ನಿರ್ಮಾಣದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಮೂರು ವರ್ಷದ ಮಗುವಿನ ಅಮಾಯಕ ಆಟ ದುರಂತಕ್ಕೆ ಕಾರಣವಾದ ಮನಕಲಕುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಮೂರು ವರ್ಷದ ಮಗು ಆಟವಾಡುತ್ತಾ ಏಕಾಏಕಿ ಟ್ರ್ಯಾಕ್ಟರ್ ಕೀ ಆನ್ ಮಾಡಿದ ಪರಿಣಾಮ ಟ್ರ್ಯಾಕ್ಟರ್ ಹರಿದು ತಂದೆ ಮೃತಪಟ್ಟ ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ.
ಕೆಎಸ್ಸಾರ್ಟಿಸಿ ಅರಕಲಗೂಡು ಘಟಕದಲ್ಲಿ ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಯಶ್ವಂತ್(37) ಮೃತಪಟ್ಟವರು.
ಯಶ್ವಂತ್ ಹೊಸ ಮನೆ ನಿರ್ಮಿಸುತ್ತಿದ್ದು, ಆರ್ ಸಿಸಿ ಕಾಮಗಾರಿಗಾಗಿ ಸೆಂಟ್ರಿಂಗ್ ಸಾಮಗ್ರಿಗಳನ್ನು ಟ್ರಾಕ್ಟರ್ ನಲ್ಲಿ ತರಿಸಲಾಗಿತ್ತು. ಸಾಮಗ್ರಿಗಳನ್ನು ಇಳಿಸಿದ ಬಳಿಕ ಚಾಲಕ ಟ್ರಾಕ್ಟರ್ ಕೀಯನ್ನು ವಾಹನದಲ್ಲೇ ಬಿಟ್ಟು ಕೆಳಗೆ ಇಳಿದಿದ್ದರು. ಇದನ್ನು ಗಮನಿಸದ ಯಶ್ವಂತ್ ತನ್ನ ಮೂರು ವರ್ಷದ ಮಗುವನ್ನು ನಿಲ್ಲಿಸಿದ್ದ ಟ್ರಾಕ್ಟರ್ ಮೇಲೆ ಕೂರಿಸಿ ಆಟವಾಡಿಸುತ್ತಿದ್ದರು. ಈ ವೇಳೆ ಮಗು ಆಕಸ್ಮಿಕವಾಗಿ ಟ್ರಾಕ್ಟರ್ ಕೀ ಆನ್ ಮಾಡಿದೆ. ಪರಿಣಾಮ ಟ್ರಾಕ್ಟರ್ ಏಕಾಏಕಿ ಮುಂದಕ್ಕೆ ಚಲಿಸಿದೆ.
ಟ್ರಾಕ್ಟರ್ ಚಲಿಸುತ್ತಿದ್ದಂತೆ ಮಗು ಕೆಳಗೆ ಬೀಳುವುದನ್ನು ಕಂಡ ಯಶ್ವಂತ್, ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದ ಅವರ ಮೇಲೆಯೇ ಟ್ರಾಕ್ಟರ್ ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯಶ್ವಂತ್ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




