ಹಾಸನಾಂಬೆ ದರ್ಶನ| ವಿವಾದಕ್ಕೆ ಕಾರಣವಾದ ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ !

ಹಾಸನ: ಹಾಸನಾಂಬೆ ದರ್ಶನೋತ್ಸವದ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಭೇಟಿ ವಿವಾದಕ್ಕೆ ಕಾರಣವಾಗಿರುವ ಬಗ್ಗೆ ವರದಿಯಾಗಿದೆ. ಶಿಷ್ಟಾಚಾರ ಕ್ರಮಗಳನ್ನು ಪಾಲಿಸದೆ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದ ರೇವಣ್ಣ ಅವರನ್ನು ಕಂದಾಯ ಇಲಾಖೆಯ ಸಿಬ್ಬಂದಿ ಕಾರಿನಲ್ಲಿ ತಡೆದರು ಎಂದು ತಿಳಿದು ಬಂದಿದೆ.
ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ತಮ್ಮದೇ ಕಾರಿನಲ್ಲಿ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸಿದ್ದ ರೇವಣ್ಣ, ಸಾವಿರ ರೂ. ಟಿಕೆಟ್ ಪಡೆದುಕೊಂಡಿದ್ದರೂ ಗಣ್ಯರಿಗಾಗಿ ನಿಗದಿಪಡಿಸಿದ ಶಿಷ್ಟಾಚಾರ ಮಾರ್ಗವನ್ನು ಅನುಸರಿಸದೆ ನೇರವಾಗಿ ದೇವಾಲಯಕ್ಕೆ ಬಂದರು ಎನ್ನಲಾಗಿದೆ.
ತಡೆದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ, “ಯಾವ ಡಿಸಿ ಕರೀರಿ? ಎಂಪಿ ಕಾರು ಎಷ್ಟು ಸಲ ಬಂದಿದೆ, ಯಾರೂ ಏನೂ ಹೇಳಿಲ್ಲ, ಜನರನ್ನ ಕರೆ ತರೋ ಕೆಲಸವೂ ನಡೀತಲೇ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೇವಣ್ಣ ಅವರ ಜೊತೆ ಹಾಸನ ಮಹಾನಗರ ಪಾಲಿಕೆಯ ಮೇಯರ್ ಗಿರೀಶ್ ಚನ್ನವೀರಪ್ಪ ಇದ್ದು, ಅವರು ಸಾವಿರ ರೂ. ಟಿಕೆಟ್ ತಂದುಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆಯ ಸಮಯದಲ್ಲಿ ರೇವಣ್ಣ ಕಾರಿನಿಂದ ಇಳಿದು ನಡೆದು ದೇವಾಲಯದ ಒಳಗೆ ತೆರಳಿದರು. ಅಧಿಕಾರಿಗಳ ತಡೆಗೆ ಕೋಪಗೊಂಡ ರೇವಣ್ಣ ಅವರ ನಡವಳಿಕೆ ದರ್ಶನೋತ್ಸವದ ಸಮಯದಲ್ಲಿ ಅಧಿಕಾರಿಗಳಿಗೂ ಭಕ್ತರಿಗೂ ಚರ್ಚೆಯ ವಿಷಯವಾಯಿತು ಎನ್ನಲಾಗಿದೆ.







