HASSAN | ಎರಡನೇ ಮದುವೆಯನ್ನು ಪ್ರಶ್ನಿಸಿದ ಪತ್ನಿಯನ್ನು ಕೊಲೆಗೈದು ನದಿಗೆ ಎಸೆದ ಪತಿ

ಹಾಸನ, ಜ.13: ಎರಡನೇ ಮದುವೆಯಾಗಿರುವುದನ್ನು ಪ್ರಶ್ನಿಸಿದ ಮೊದಲ ಪತ್ನಿಯನ್ನು ಪತಿಯು ಕೊಲೆಗೈದು ಮೃತದೇಹವನ್ನು ನದಿಗೆ ಎಸೆದಿರುವ ಘಟನೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಜ.10ರಂದು ನಡೆದಿರುವುದು ವರದಿಯಾಗಿದೆ.
ರಾಧಾ (40) ಕೊಲೆಯಾದವರು. ಅವರ ಪತಿ ಕುಮಾರ್ ಕೊಲೆ ಆರೋಪಿಯಾಗಿದ್ದಾನೆ.
ರಾಧಾ ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸವಾಗಿದ್ದರು. ಈ ನಡುವೆ ಜನವರಿ ಮೊದಲ ವಾರದಲ್ಲಿ ಕುಮಾರ್ ಅಯ್ಯಪ್ಪ ವ್ರತಧಾರಿಯಾಗಿ ಮಾಲೆ ಧರಿಸಿದ್ದ. ಆತ ಶಬರಿಮಲೆಗೆ ತೆರಳಲು ಇರುಮುಡಿ ಕಟ್ಟುವ ವೇಳೆ ಪತ್ನಿಯ ಸ್ಥಾನದಲ್ಲಿ ಬೇರೊಬ್ಬಳು ಮಹಿಳೆ ಪೂಜೆ ಸಲ್ಲಿಸಿರುವ ವಿಚಾರ ರಾಧಾರ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಪ್ರಶ್ನಿಸಲು ಜ.10ರಂದು ರಾತ್ರಿ ರಾಧಾ ಯಡೂರಿಗೆ ಬಂದಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ರಾಧಾರನ್ನು ಕುಮಾರ್ ಹಾಗೂ ಆತನ ಮನೆಯವರು ಸೇರಿ ಹತ್ಯೆ ಮಾಡಿದ್ದಾರೆ ಎಂದು ರಾಧಾ ಅವರ ಕುಟುಂಬದವರು ಆರೋಪಿಸಿದ್ದಾರೆ.
ಈ ಮಧ್ಯೆ ಸೋಮವಾರ ಆರೋಪಿ ಕುಮಾರ್ ತಾನು ರಾಧಾರನ್ನು ಕೊಲೆಗೈದು ಹಾಸನ ತಾಲೂಕಿನ ಕಂದಲಿ ಸಮೀಪದ ಯಗಚಿ ನದಿಗೆ ಮೃತದೇಹವನ್ನು ಎಸೆದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದನೆನ್ನಲಾಗಿದೆ. ಈ ಮಾಹಿತಿಯನ್ನು ಆಧರಿಸಿ ಯಗಚಿ ನದಿಯಲ್ಲಿ ಮಂಗಳವಾರ ಶೋಧ ನಡೆಸಿದ ಪೊಲೀಸರು ರಾಧಾ ಅವರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







