Hassan | ಪ್ರತ್ಯೇಕ ರಸ್ತೆ ಅಪಘಾತ : ಇಬ್ಬರ ಮೃತ್ಯು

ಸಾಂದರ್ಭಿಕ ಚಿತ್ರ
ಹಾಸನ : ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿರುವುದು ವರದಿಯಾಗಿದೆ.
ನಂದಿನಿ ಮಿಲ್ಕ್ ಪಾರ್ಲರ್ ಎದುರು ಸುರೇಶ್ ಎಂಬವರು ಬೈಕ್ ಅನ್ನು ಅತೀವೇಗದಲ್ಲಿ ಓಡಿಸಿ ಹಂಪ್ಸ್ ಹಾರಿಸಿದ ಪರಿಣಾಮ ಹಿಂಬದಿ ಕುಳಿತಿದ್ದ ಹಾಸನ ತಾಲೂಕು ಮಾವಿನಹಳ್ಳಿ ಗ್ರಾಮದ ಜಯಮ್ಮ (68)ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಹಾಸನದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ದೂರಿನ ಆಧಾರದ ಮೇಲೆ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿ ಸಂಚಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ತಿರುಮಲಾಪುರ ಗ್ರಾಮದ ಜಯಂತಿ (50) ಶನಿವಾರ ಸಂಜೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪತಿ ಕೇಶವಮೂರ್ತಿ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಹೆಂಡತಿ ಜಯಂತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಕೆಲಸದ ನಿಮಿತ್ತ ಪಟ್ಟಣಕ್ಕೆ ಬಂದಿದ್ದರು. ವಾಪಸ್ಸಾಗುತ್ತಿರುವಾಗ ಸೂರನಹಳ್ಳಿಯ ಬಳಿ ಎದುರುಗಡೆಯಿಂದ ಬಂದ ಲಾರಿ ಅತೀವೇಗ ನೇರವಾಗಿ ಬೈಕ್ಗೆ ಢಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಜಯಂತಿ ಅವರ ತಲೆಯ ಮೇಲೆ ಲಾರಿ ಚಕ್ರ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.







