Hassan | ಬಕ್ರೀದ್ ಆಚರಣೆ- ಜಾನುವಾರುಗಳನ್ನು ವಧೆ ಮಾಡದಿರಲು ಮುಸ್ಲಿಂ ಒಕ್ಕೂಟ ತೀರ್ಮಾನ

ಹಾಸನ : ‘ಬಕ್ರೀದ್’ ಹಿನ್ನೆಲೆಯಲ್ಲಿ, ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹತ್ವದ ತೀರ್ಮಾನಗಳನ್ನು ಪ್ರಕಟಿಸಿದೆ. ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿ ನೆಲೆಸುವ ಉದ್ದೇಶದಿಂದ ಈ ಬಾರಿ ಜಿಲ್ಲೆಯಾದ್ಯಂತ ಜಾನುವಾರುಗಳನ್ನು (ಹಸು, ಎಮ್ಮೆ) ವಧೆ ಮಾಡದಿರಲು ಒಕ್ಕೂಟ ನಿರ್ಧರಿಸಿದೆ.
ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಕರ್ನಾಟಕ ಜಾನುವಾರು ಹತ್ಯೆ ಮತ್ತು ಸಾಗಾಟ ಪ್ರತಿಬಂಧಕ ಕಾಯ್ದೆ-2020 ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ. ಇದು ನಮ್ಮ ಆಹಾರದ ಹಕ್ಕಿನ ಮೇಲೆ ಮತ್ತು ಸಂವಿಧಾನದತ್ತವಾದ ಧಾರ್ಮಿಕ ಹಕ್ಕುಗಳ ಮೇಲೆ ನಡೆದಿರುವ ದಾಳಿ" ಎಂದು ಅಸಮಾಧಾನ ವ್ಯಕ್ತಪಡಿಸಿದರು
ಒಕ್ಕೂಟದಿಂದ ಪ್ರಕಟಿಸಲಾದ ಪ್ರಮುಖ ನಿರ್ಧಾರಗಳು:
► ಜಾನುವಾರುಗಳ ವಧೆಗೆ ಸ್ವಯಂ ನಿಷೇಧ: ಸರಕಾರ ಈ ಕಾಯ್ದೆಯನ್ನು ವಾಪಸ್ ಪಡೆಯುವವರೆಗೆ, ಹಾಸನ ಜಿಲ್ಲೆಯಾದ್ಯಂತ ಜಾನುವಾರುಗಳನ್ನು ವಧೆ ಮಾಡದಿರಲು ಮತ್ತು ಜಿಲ್ಲೆಯ ಯಾವುದೇ ಜಾನುವಾರು ಸಂತೆಗಳಲ್ಲಿ ಭಾಗವಹಿಸದಿರಲು ಮುಸ್ಲಿಂ ಸಮುದಾಯದ ನಾಯಕರು ಸರ್ವಾನುಮತದ ತೀರ್ಮಾನ ಕೈಗೊಂಡಿದ್ದಾರೆ.
► ಅನಧಿಕೃತ ಬ್ಯಾನರ್‌ಗಳ ತೆರವಿಗೆ ಆಗ್ರಹ:
ಹಾಸನ ನಗರದ ಮೊಹಲ್ಲಾಗಳಲ್ಲಿ ಯಾವುದೇ ಅಧಿಕೃತ ಆದೇಶವಿಲ್ಲದೆ, ಸಮುದಾಯವನ್ನು ಪ್ರಚೋದಿಸುವ ಅಥವಾ ಬೆದರಿಸುವ ರೀತಿಯಲ್ಲಿ ಅಳವಡಿಸಿರುವ ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸಬೇಕು. ಇಂತಹ ಕೃತ್ಯಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯನ್ನು ಒಕ್ಕೂಟ ಆಗ್ರಹಿಸಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಅನ್‌ಷಾದ್ ಇ-ಪಾಳ್ಯ, ಯೂಸುಫ್ ಖಾನ್, ಅಮೀರ್ ಜಾನ್, ಇಮ್ರಾನ್ ಪಾಷ (ವಕೀಲರು), ನಯೀಮ್, ಶಾಕಿರ್, ಸುಹೇಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.






