Hassan | ಏತ ನೀರಾವರಿ ನೀರು ಹರಿಸಲು ಆಗ್ರಹಿಸಿ ರೈತರಿಂದ ಧರಣಿ

ಹಾಸನ : ಏತ ನೀರಾವರಿ ಯೋಜನೆಯಿಂದ ಸಾಲಗಾಮೆ ಹೋಬಳಿಯ ರೈತರ ಜಮೀನುಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ಹೋಬಳಿ ಹಾಗೂ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ರೈತರ ಕಾಲ್ನಡಿಗೆ ಹೋರಾಟಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಜೆ.ಗೌಡ ಮತ್ತು ಪುಷ್ಪಗಿರಿ ಮಠದ ಮಠಾಧೀಶ ಶ್ರೀ ಸೋಮಶೇಖರ ಸ್ವಾಮೀಜಿ ಸಾಥ್ ನೀಡಿದ್ದಾರೆ.
ನಗರದ ತಣ್ಣೀರುಹಳ್ಳದ ಬಳಿಯ ಶ್ರೀ ಶಿವಲಿಂಗೇಶ್ವರ ಮಠದಿಂದ ಆರಂಭವಾದ ರೈತರ ಕಾಲ್ನಡಿಗೆ ಧರಣಿಯಲ್ಲಿ ಮೆರವಣಿಗೆ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿತು. ವಿವಿಧ ಹೋಬಳಿ ಹಾಗೂ ಗ್ರಾಮಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಏತ ನೀರಾವರಿ ಯೋಜನೆಯಿಂದ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದ ರೈತರು, ನೀರು ಹರಿಸುವ ಕುರಿತು ಸ್ಪಷ್ಟ ಭರವಸೆ ನೀಡುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
ರೈತ ಸಂಘದ ರಾಜ್ಯ ನಾಯಕ ಕಣಗಾಲ್ ಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಧರಣಿನಿರತರೊಂದಿಗೆ ಮಾತುಕತೆ ನಡೆಸಿ, ರೈತರ ಬೇಡಿಕೆಗಳನ್ನು ಆಲಿಸಿದರು. ಸೆ.28ರೊಳಗೆ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಯವರ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಬಿಟ್ಟಗೌಡನಹಳ್ಳಿ ಮಂಜು, ಮಾರನಹಳ್ಳಿ, ಶೇಷಣ್ಣ, ನಾಗರಾಜು, ಫಾಲಾಕ್ಷ, ಬಿಜೆಪಿ ಮುಖಂಡರಾದ ಪುರುಷೋತ್ತಮ್, ಲಲಾಟ್ ಮೂರ್ತಿ ಉಪಸ್ಥಿತರಿದ್ದರು.






