ಹಾಸನ | ಕಲ್ಲು ಗಣಿಗಾರಿಕೆ ವೇಳೆ ಅವಘಡ; ಓರ್ವ ಕಾರ್ಮಿಕ ಮೃತ್ಯು, ನಾಲ್ವರಿಗೆ ಗಾಯ

ಹಾಸನ : ಕಲ್ಲು ಗಣಿಗಾರಿಕೆ ವೇಳೆ ಅವಘಡ ಸಂಭವಿಸಿ ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ತಾಲೂಕಿನ ದೂಮಗೆರೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ತೀವ್ರ ಗಾಯಗೊಂಡಿದ್ದ ಮಣಿ ಎಂಬುವವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ವರಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಣಿಗಾರಿಕೆ ವೇಳೆ ದೊಡ್ಡ ಬಂಡೆ ಕುಸಿದು ಅವಘಡ ಆಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ವಿಷಯ ತಿಳಿದು ಎಸ್ಪಿ ಮುಹಮ್ಮದ್ ಸುಜೀತಾ, ಡಿಸಿ ಸಿ.ಸತ್ಯಭಾಮ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದ್ದಾರೆ.
ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಾಸನದ ಬಂಡೆ ದೇವರಾಜ್ ಎಂಬುವವರಿಗೆ ಸೇರಿದ ಕ್ವಾರಿಯಲ್ಲಿ ಈ ದುರ್ಘಟನೆ ಸಂಬವಿಸಿರುವುದಾಗಿ ಆರೋಪಿಸಲಾಗಿದೆ. ಕೂಡಲೇ ಇತನ ವಿರುದ್ಧ ದೂರು ದಾಖಲು ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಗ್ರಾನೈಟ್ ಕ್ವಾರಿ ಮಾಲೀಕ ದೇವರಾಜ್ ಅವರ ಪುತ್ರ ಅರ್ಜುನ್‌ನನ್ನು ಶಾಂತಿಗ್ರಾಮ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಧ್ಯಾಹ್ನ ನಡೆದ ಘಟನೆ ಮುಚ್ಚಿಟ್ಟ ಆರೋಪದಡಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಶಾಂತಿಗ್ರಾಮ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.