Hassan | ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಸಿಐಟಿಯು ಧರಣಿ

ಹಾಸನ, ಮೇ 30: ಸಿಐಟಿಯು ರಾಜ್ಯ ಸಮಿತಿಯ ಕರೆಯ ಮೇರೆಗೆ, ಶನಿವಾರ ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕರು ಬೃಹತ್ ಧರಣಿ ನಡೆಸಿದರು.
ಮಾಸಿಕ ಸರಾಸರಿ 36,000 ರೂ. ಕನಿಷ್ಠ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ರಾಜ್ಯದ ತಿದ್ದುಪಡಿ ಹಾಗೂ ಗುತ್ತಿಗೆ ಕಾರ್ಮಿಕರ ಖಾಯಮಾತಿಗೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಧರಣಿನಿರತ ಕಾರ್ಮಿಕರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಸುಪ್ರೀಂ ಕೋರ್ಟ್ ನ ರೆಪ್ಟಕೋಸ್ ಪ್ರಕರಣದ ತೀರ್ಪಿನ ಮಾನದಂಡಗಳ ಆಧಾರದ ಮೇಲೆ, ಪ್ರಸಕ್ತ ಬೆಲೆ ಏರಿಕೆ ಹಾಗೂ ಜೀವನ ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ ಕಾರ್ಮಿಕರಿಗೆ ಮಾಸಿಕ ಸರಾಸರಿ 36 ಸಾವಿರ ರೂ. ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸ್ವಾಗತಿಸುತ್ತಲೇ, ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು. ಮೇ 22ರಂದು ಹೊರಡಿಸಲಾದ ಅಧಿಸೂಚನೆಯನ್ನು ಕರಡು ಅಧಿಸೂಚನೆ ಹೊರಡಿಸಿದ ದಿನಾಂಕವಾದ ಎಪ್ರಿಲ್ 11ರಿಂದಲೇ ಪೂರ್ವಾನ್ವಯಿಸಿ ಜಾರಿಗೆ ತರಬೇಕು. ಇದರಿಂದ ಬಹುಸಂಖ್ಯಾತ ಕಾರ್ಮಿಕರಿಗೆ ಸಿಗಬೇಕಾದ ಹಿಂಬಾಕಿ ದೊರೆಯಲಿದೆ ಎಂದು ಆಗ್ರಹಿಸಿದರು.
ಕೈಬಿಟ್ಟಿರುವ 19 ಉದ್ದಿಮೆಗಳ ಸೇರ್ಪಡೆಗೆ ಒತ್ತಾಯ:
ಕನಿಷ್ಠ ವೇತನದ ಅಧಿಸೂಚನೆಯಿಂದ ಗಾರ್ಮೆಂಟ್ಸ್, ಪ್ಲಾಂಟೇಷನ್, ಸ್ಕೀಂ ನೌಕರರು, ಬೀಡಿ, ಅಗರಬತ್ತಿ ಮತ್ತು ಕೈಮಗ್ಗ ಸೇರಿದಂತೆ 19 ವಿಭಾಗದ ಉದ್ದಿಮೆಗಳನ್ನು ಕೈಬಿಡಲಾಗಿದೆ. ಇದರಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗುತ್ತಿದ್ದು, ಕೂಡಲೇ ಈ ಉದ್ದಿಮೆಗಳಿಗೂ ಕನಿಷ್ಠ ವೇತನವನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಮಿಕ ಸಂಹಿತೆಗಳಿಗೆ 'ಕರ್ನಾಟಕ ತಿದ್ದುಪಡಿ ನಿಯಮಗಳನ್ನು' ಜಾರಿಮಾಡಿ.
ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಶ್ರಮಿಕರ ಶೋಷಣೆ ಹೆಚ್ಚಿಸಲಿವೆ ಹಾಗೂ ಕಾರ್ಮಿಕರು ಹೋರಾಟಗಳಿಂದ ಪಡೆದ ಹಕ್ಕುಗಳನ್ನು ಮೊಟಕುಗೊಳಿಸಲಿವೆ. ಈ ಸಂಹಿತೆಗಳನ್ನು ಯಥಾವತ್ತಾಗಿ ರಾಜ್ಯದಲ್ಲಿ ಜಾರಿಗೆ ತರಬಾರದು. ಸಂವಿಧಾನದತ್ತವಾದ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರವು ಈ ಸಂಹಿತೆಗಳಿಗೆ ಕಾರ್ಮಿಕರ ಪರವಾದ 'ಕರ್ನಾಟಕ ತಿದ್ದುಪಡಿ'ಗಳನ್ನು ತಂದ ನಂತರವೇ ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆ ಪದ್ಧತಿ ರದ್ದತಿ ಹಾಗೂ ಖಾಯಮಾತಿಗೆ ಶಾಸನ:
ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿರುವ ಹಂಗಾಮಿ, ಗುತ್ತಿಗೆ, ಟ್ರೈನಿ ಮತ್ತಿತರ ಖಾಯಂಯೇತರ ಕಾರ್ಮಿಕರು ಕಡಿಮೆ ವೇತನಕ್ಕೆ, ಯಾವುದೇ ಕಾನೂನುಬದ್ಧ ಸವಲತ್ತುಗಳಿಲ್ಲದೆ ಅಭದ್ರತೆಯಲ್ಲಿ ದುಡಿಯುತ್ತಿದ್ದಾರೆ. ಪ್ರಸಕ್ತ ಸರ್ಕಾರದಡಿಯಲ್ಲಿರುವ ಸೊಸೈಟಿ ಮಾದರಿಯನ್ನು ಕೈಬಿಟ್ಟು, ಖಾಯಂಯೇತರ ಕಾರ್ಮಿಕರನ್ನು ಖಾಯಂಗೊಳಿಸಲು ಶಾಸನ ರೂಪಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ, ಖಜಾಂಚಿ ಅರವಿಂದ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳಾ, ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಸೌಮ್ಯ ಮತ್ತು ಸಿಐಟಿಯುನ ಇತರೆ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.






