ವಾಟ್ಸ್ ಆ್ಯಪ್ ಚಾಟ್ ಲಂಚ ಪ್ರಕರಣ | ಆರೋಪ ನಿರಾಕರಿಸಿದ ಹಾಸನ ಜಿಲ್ಲಾಧಿಕಾರಿ; ಸೈಬರ್ ಕ್ರೈಂ ತನಿಖೆಗೆ ದೂರು ದಾಖಲು
ಪ್ರಕರಣದ ಬಗ್ಗೆ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಿದೆ, ತಪ್ಪಿತಸ್ಥರು ಕಾನೂನು ಕ್ರಮ ಎದುರಿಸಲೇಬೇಕು: ಡಿಸಿ

ಹಾಸನ : ಜಿಲ್ಲಾಧಿಕಾರಿ ಕಚೇರಿಯ ಪಿಎ ವಾಟ್ಸ್ ಆ್ಯಪ್ ಚಾಟ್ ಆಧರಿಸಿ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳನ್ನು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸಾರಾಸಗಟಾಗಿ ತಳ್ಳಿಹಾಕಿದ್ದು, ಇದು ತಮ್ಮ ತೇಜೋವಧೆ ಮಾಡುವ ದುರುದ್ದೇಶಪೂರಿತ ಷಡ್ಯಂತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಪ್ರಕರಣದ ನೈಜತೆ ಹೊರತರಲು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿ ಎಫ್‌ಐಆರ್ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿರುವ ಅವರು, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಾಟ್ಸ್ ಆ್ಯಪ್ ಚಾಟ್ ವಿಷಯ ಸಂಪೂರ್ಣ ಅನಧಿಕೃತ ಹಾಗೂ ಆಧಾರರಹಿತ. ನಾವು ಎಂದಿಗೂ ಯಾವುದೇ ಅಕ್ರಮ ಅಥವಾ ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ, ಮುಂದೆಯೂ ಭಾಗಿಯಾಗುವುದಿಲ್ಲ. ಒಂದು ವೇಳೆ ಕಚೇರಿಯ ಪಿಎ ಅಥವಾ ಆ ವಿಭಾಗದಿಂದ ಇಂತಹ ತಪ್ಪು ಸಂದೇಶಗಳು ರವಾನೆಯಾಗಿದ್ದರೆ, ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸುಳ್ಳು ಮಾಹಿತಿಯನ್ನು ಸೃಷ್ಟಿಸಿ ಇನ್ನೊಬ್ಬರ ವ್ಯಕ್ತಿತ್ವ ಹರಣ ಮಾಡುವುದು, ಅಧಿಕಾರಿಗಳನ್ನು ಮಾನಸಿಕವಾಗಿ ಕುಗ್ಗಿಸುವುದು ಹಾಗೂ ತಲೆತಗ್ಗಿಸುವಂತೆ ಮಾಡುವುದು ಅಕ್ಷಮ್ಯ ಅಪರಾಧ. ಇಂತಹ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ಯಾರೂ ನಂಬಬಾರದು. ಈ ಸಂಪೂರ್ಣ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಿದೆ. ಇದಕ್ಕಾಗಿ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿ, ಎಫ್‌ಐಆರ್ ದಾಖಲಿಸಲಾಗುತ್ತಿದ್ದು, ತಪ್ಪಿತಸ್ಥರು ಕಾನೂನು ಕ್ರಮ ಎದುರಿಸಲೇಬೇಕು ಎಂದು ಜಿಲ್ಲಾಧಿಕಾರಿಗಳು ಖಡಕ್ ಆಗಿ ನುಡಿದಿದ್ದಾರೆ.






