ಹಾಸನ: ಬಾರ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ಹಾಸನ: ನಗರದ ಕಸ್ತೂರಬಾ ರಸ್ತೆಯ ಸಿಟಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸುಪ್ರಿಯಾ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಬುಧವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತಕ್ಷಣಗಿ ಸ್ಥಳಕ್ಕೆ ಧಾವಿಸಿ ಸತತ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಪರಿಣಾಮ ಬೆಂಕಿ ಮತ್ತು ಹೊಗೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದರು.
ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅಗ್ನಿಶಾಮಕ ದಳದ ಮುಖಂಡ ನಿಂಗರಾಜು, ಬೆಳಗ್ಗೆ ಸುಪ್ರಿಯಾ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದ ತಕ್ಷಣ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಲಾಯಿತು. ಕಟ್ಟಡದ ನೆಲದಡಿ (ಅಂಡರ್ಗ್ರೌಂಡ್) ಅಳವಡಿಸಲಾಗಿದ್ದ ವಿದ್ಯುತ್ ಕೇಬಲ್ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಜಂಕ್ಷನ್ ಬಾಕ್ಸ್ ಹಾಗೂ ಮೀಟರ್ ಬೋರ್ಡ್ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿತು. ಬೆಂಕಿಗಿಂತಲೂ ದಟ್ಟ ಹೊಗೆ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಸಂಪೂರ್ಣ ನೆಲದಡಿ ಭಾಗ ಹೊಗೆಯಿಂದ ಆವರಿಸಿಕೊಂಡಿದ್ದರಿಂದ ಟಾರ್ಚ್ ಬೆಳಕು ಹಾಕಿದರೂ ಒಂದು ಅಡಿ ದೂರವೂ ಕಾಣದ ಸ್ಥಿತಿ ನಿರ್ಮಾಣವಾಗಿತ್ತು. ಸಾಮಾನ್ಯವಾಗಿ ಒಳಗೆ ಪ್ರವೇಶಿಸುವುದು ಅಸಾಧ್ಯವಾಗಿದ್ದ ಕಾರಣ ಸಿಬ್ಬಂದಿ ಕೃತಕ ಉಸಿರಾಟದ ಸಾಧನ ಧರಿಸಿ ಒಳಗೆ ಪ್ರವೇಶಿಸಿದರು. ಆದರೂ ದಟ್ಟ ಹೊಗೆಯಿಂದ ಬೆಂಕಿಯ ಮೂಲವನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು ಎಂದರು. ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಳಿಸಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಆರಂಭದಲ್ಲಿ ಕಾರ್ಬನ್ ಡೈಆಕ್ಸೈಡ್ (ಅಔ) ಹಾಗೂ ಡ್ರೈ ಕೆಮಿಕಲ್ ಪೌಡರ್ ಉಪಕರಣಗಳ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಲಾಯಿತು. ನಂತರ ಹೊರಭಾಗದಿಂದ ನೀರಿನ ಸಿಂಪಡಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಹೆಚ್ಚುವರಿ ಅಗ್ನಿಶಾಮಕ ವಾಹನವನ್ನು ಕೂಡ ಕರೆಸಿಕೊಳ್ಳಬೇಕಾಯಿತು. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸಿಬ್ಬಂದಿ ಶ್ರಮಪಟ್ಟು ಕೊನೆಗೆ ಬೆಂಕಿ ಹಾಗೂ ಹೊಗೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದರು.
ಅಂಡರ್ ಗ್ರೌಂಡ್ ನ ಒಂದು ಚಿಕ್ಕ ರೂಮ್ ಒಳಗೆ ಜಂಕ್ಷನ್ ಬಾಕ್ಸ್, ಮೀಟರ್ ಬೋರ್ಡ್ ಹಾಗೂ ಪ್ರಮುಖ ವಿದ್ಯುತ್ ಕೇಬಲ್ಗಳನ್ನು ಅಳವಡಿಸಿರುವುದು ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ತಲುಪುವ ರೀತಿಯಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಬೇಕು. ನೆಲದಡಿ ಮುಚ್ಚಿದ ಕೊಠಡಿಗಳಲ್ಲಿ ಸಮರ್ಪಕ ಗಾಳಿ ಸಂಚಾರ, ಹೊಗೆ ಹೊರಹೋಗುವ ವ್ಯವಸ್ಥೆ ಹಾಗೂ ತುರ್ತು ನಿರ್ಗಮನ ದ್ವಾರ (ಎಕ್ಸಿಟ್) ಕಡ್ಡಾಯವಾಗಿ ಇರಬೇಕು ಎಂದು ನಿಂಗರಾಜು ಸಲಹೆ ನೀಡಿದರು.
ಈ ಘಟನೆಯಲ್ಲಿ ಕಟ್ಟಡದ ಮುಖ್ಯ ಭಾಗಕ್ಕೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಜಂಕ್ಷನ್ ಬಾಕ್ಸ್, ವಿದ್ಯುತ್ ಕೇಬಲ್ ಗಳು, ಮೀಟರ್ ಬೋರ್ಡ್ ಸೇರಿದಂತೆ ಕೆಲವು ವಿದ್ಯುತ್ ಉಪಕರಣಗಳು ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದೆ. ಪ್ರಸಕ್ತ ಸ್ಥಳದಲ್ಲಿದ್ದ ಹೊಗೆ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಪರಿಸ್ಥಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.






