Hassan : ಸಾಲದ ಹಣ ವಾಪಸ್ ಕೇಳಿದ್ದಕ್ಕೆ ವೈಷಮ್ಯ; ವ್ಯಕ್ತಿ ಕೊಲೆಯಲ್ಲಿ ಅಂತ್ಯ

ಮಹಮ್ಮದ್ ಸಿದ್ದಿಕ್
ಬೇಲೂರು: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಉಂಟಾದ ವೈಷಮ್ಯ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಅರೇಹಳ್ಳಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ರೇಷ್ಮಾ ಅಲಿಯಾಸ್ ನಿಶಾ ಬಾನು ಅವರು ಸುಮಾರು ಒಂದು ವರ್ಷದ ಹಿಂದೆ ತಮ್ಮ ತಂಗಿ ದಿವ್ಯಾಳಿಗೆ 50 ಸಾವಿರ ಹಣವನ್ನು ಸಾಲವಾಗಿ ನೀಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ರೇಷ್ಮಾ ಅವರು ಹಣವನ್ನು ವಾಪಸ್ ನೀಡುವಂತೆ ಕೇಳಿದ್ದರಿಂದ ಕುಟುಂಬದವರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದುಬಂದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿವ್ಯಾಳ ಪತಿ ಸುಜಿತ್ ಹಾಗೂ ರೇಷ್ಮಾ ಅವರ ಪತಿ ಮಹಮ್ಮದ್ ಸಿದ್ದಿಕ್ ನಡುವೆ ರಾತ್ರಿ ಸುಮಾರು 8 ಗಂಟೆ ವೇಳೆಗೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಸುಜಿತ್ ತನ್ನ ಬಳಿ ಇದ್ದ ಕತ್ತರಿಯಿಂದ ಸಿದ್ದಿಕ್ ಅವರ ಕುತ್ತಿಗೆಯ ಹಿಂಭಾಗ ಸೇರಿದಂತೆ ದೇಹದ ಇತರ ಭಾಗಗಳಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸಿದ್ದಿಕ್ ಅವರನ್ನು ಅರೇಹಳ್ಳಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರೇಹಳ್ಳಿ ಪೊಲೀಸರು ಆರೋಪಿ ಸುಜಿತ್ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.






