Hassan | ಹೃದಯಾಘಾತವೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಪರಿಶೀಲನೆಯಲ್ಲಿ ಬಯಲಾದ ಹತ್ಯೆ ರಹಸ್ಯ

ಸಾಂದರ್ಭಿಕ ಚಿತ್ರ (AI)
ಹಾಸನ : ವ್ಯಕ್ತಿಯ ಸಾವನ್ನು ಹೃದಯಾಘಾತವೆಂದು ನಂಬಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ, ಅದು ಸಹಜ ಸಾವಲ್ಲ, ಮಾರಕಾಸ್ತ್ರಗಳಿಂದ ನಡೆದ ಹತ್ಯೆಯ ಕೃತ್ಯ ಎಂಬ ಆಘಾತಕಾರಿ ಸಂಗತಿ ಹಾಸನ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ನಿವಾಸಿ ಮಂಜುನಾಥಸ್ವಾಮಿ (58) ಹತ್ಯೆಯಾದ ವ್ಯಕ್ತಿ. ಅವಿವಾಹಿತರಾಗಿದ್ದ ಇವರು ಗ್ರಾಮದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.
ಘಟನೆಯ ವಿವರ: ಘಟನೆಯ ದಿನ ಬೆಳಗ್ಗೆ ಮಂಜುನಾಥಸ್ವಾಮಿ ಅವರ ಮನೆಗೆ ಸ್ನೇಹಿತ ನಾಗಣ್ಣ ಬಂದಿದ್ದರು. ಆದರೆ ಮನೆಯ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿದ್ದರಿಂದ ಅವರು ಒಳಗೆ ಹೋಗಲಾಗದೆ ವಾಪಸಾಗಿದ್ದರು. ಅದೇ ಸಂದರ್ಭದಲ್ಲಿ ಮನೆಯೊಳಗಿಂದ ಟಿವಿ ಜೋರಾಗಿ ಶಬ್ದ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯ ನಿವಾಸಿ ಜಗದೀಶ್ ಕಿಟಕಿಯ ಮೂಲಕ ಇಣುಕಿ ನೋಡಿದ್ದಾರೆ. ಅನುಮಾನಗೊಂಡ ನಾಗಣ್ಣ ಮತ್ತು ಜಗದೀಶ್ ಇಬ್ಬರೂ ಸೇರಿ ಬಾಗಿಲ ಚಿಲಕ ತೆಗೆದು ಒಳಗೆ ಪ್ರವೇಶಿಸಿದಾಗ, ಮಂಜುನಾಥಸ್ವಾಮಿ ಕುಳಿತ ಸ್ಥಿತಿಯಲ್ಲೇ ಬಿದ್ದಿರುವುದು ಕಂಡು ಬಂದಿದೆ.
ಪೊಲೀಸ್ ಪರಿಶೀಲನೆಯಲ್ಲಿ ಕೊಲೆ ರಹಸ್ಯ ಬಯಲು: ಆರಂಭದಲ್ಲಿ ಹೃದಯಾಘಾತದಿಂದಲೇ ಮೃತಪಟ್ಟಿರಬಹುದು ಎಂದು ಭಾವಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದರು. ಆದರೆ ಸಾವಿನ ಬಗ್ಗೆ ಕೊಂಚ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ರವಾನಿಸಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮಂಜುನಾಥಸ್ವಾಮಿ ಅವರ ಕತ್ತಿಗೆ ಚೂಪಾದ ಮಾರಕಾಸ್ತ್ರದಿಂದ ಇರಿದು, ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಶ್ವಾನದಳ, ತಜ್ಞರ ಭೇಟಿ: ಮಂಜುನಾಥಸ್ವಾಮಿ ಸುಮಾರು 15 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಬಿದಿರು ಬೆಳೆದಿದ್ದರು. ಸುಮಾರು 30 ವರ್ಷಗಳ ಹಿಂದೆ ಅಪಹರಣ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗೊರೂರು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.






