Hassan | ಸಿಡಿಲು ಬಡಿದು ಅರ್ಚಕ ಮೃತ್ಯು

ಹಾಸನ, ಮೇ 16: ಹಾಸನ ಜಿಲ್ಲೆ ವಿವಿಧೆಡೆ ಶುಕ್ರವಾರ ಸಂಜೆಯೂ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಈ ಮಧ್ಯೆ ಸಿಡಿಲು ಬಡಿದು ರೈತರೂ ಆಗಿರುವ ಹಾಗೂ ದೇವಾಲಯದ ಅರ್ಚಕರೊಬ್ಬರು ಮೃತಪಟ್ಟ ಘಟನೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರಾಗಿದ್ದ ರಂಗನಾಥ್ (60) ಮೃತಪಟ್ಟವರು. ರಂಗನಾಥ್ ಶುಕ್ರವಾರ ಸಂಜೆ ವೇಳೆ ತಮ್ಮ ಜಮೀನಿನಲ್ಲಿ ಕಟ್ಟಿದ್ದ ಜಾನುವಾರುಗಳನ್ನು ಕರೆತರುವ ಉದ್ದೇಶದಿಂದ ತೆರಳಿದ್ದರು. ಜಾನುವಾರುಗಳೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ರಂಗನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಮಳೆಯೊಂದಿಗೆ ಗುಡುಗು-ಸಿಡಿಲು ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ರೈತರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Next Story




