ಹಾಸನ : ಪಬ್, ಹೋಟೆಲ್ ಗಳಿಗೆ ಎಸ್ಪಿ ನೇತೃತ್ವದಲ್ಲಿ ದಿಢೀರ್ ದಾಳಿ, ಪರಿಶೀಲನೆ

ಹಾಸನ: ನಗರದ ಪಬ್, ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭಾನ್ವಿತಾ ನೇತೃತ್ವದ ಪೊಲೀಸ್ ತಂಡ ದಿಢೀರ್ ದಾಳಿ ನಡೆಸಿದೆ.
ನಗರದ ಎಸ್ಎಸ್ ಪಬ್ ಹಾಗೂ ಆರ್ಯ ಮ್ಯಾನ್ಶನ್ ಸೇರಿದಂತೆ ಕೆಲವು ಪಬ್ ಗಳಲ್ಲಿ ಪೊಲೀಸ್ ಅಧಿಕಾರಿಗಳ ತಂಡ ತಪಾಸಣೆ ನಡೆಸಿದ್ದು, ಪಬ್ ಗಳ ಪರವಾನಿಗೆ ಹಾಗೂ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿತು.
ತಪಾಸಣೆ ವೇಳೆ ಪಬ್ ಪರವಾನಿಗೆ ತೋರಿಸುವಂತೆ ಎಸ್ಪಿ ಶುಭಾನ್ವಿತಾ ಅವರು ವ್ಯವಸ್ಥಾಪಕರಿಗೆ ಸೂಚಿಸಿದರು. ಈ ವೇಳೆ ಲೈಸೆನ್ಸ್ ಹಾಜರುಪಡಿಸಲು ವಿಳಂಬ ಮಾಡಿದ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡು, ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು ಎನ್ನಲಾಗಿದೆ.
ಪಬ್ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ವ್ಯಕ್ತಿಗಳು ಇದ್ದುದು ಪೊಲೀಸರ ಗಮನಕ್ಕೆ ಬಂದಿದ್ದು, ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸಲಾಗುತ್ತಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಪಬ್ಗಳು ಮತ್ತು ಹೋಟೆಲ್ಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದರು. ನಗರದ ಪಬ್, ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪರವಾನಿಗೆ ನಿಯಮಗಳು, ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಕೆ ನಿಷೇಧ ಸೇರಿದಂತೆ ಕಾನೂನುಬದ್ಧ ನಿಯಮಗಳ ಪಾಲನೆ ಕುರಿತು ಪೊಲೀಸರು ಪರಿಶೀಲನೆ ನಡೆಸಿರುವುದು ಗಮನ ಸೆಳೆದಿದೆ.






