ವಿಗ್ರಹದ ಮೇಲೆ ಚಪ್ಪಲಿ ಇಟ್ಟ ಪ್ರಕರಣ | ಮಹಿಳೆಯ ಪತ್ತೆಗೆ ಎಂಟು ತನಿಖಾ ತಂಡ ರಚನೆ : ಹಾಸನ ಎಸ್ಪಿ ಮೊಹಮ್ಮದ್ ಸುಜಿತಾ

ಎಸ್ಪಿ ಮೊಹಮ್ಮದ್ ಸುಜಿತಾ
ಬೇಲೂರು : ಪಟ್ಟಣದ ಪುರಸಭೆ ಆವರಣದಲ್ಲಿರುವ ದೇವಾಲಯದಲ್ಲಿ ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಡಲ್ಪಟ್ಟಿರುವ ಘಟನೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜಿತಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಕೃತ್ಯ ರಾತ್ರಿ ವೇಳೆಯಲ್ಲಿ ನಡೆದಿದ್ದು, ಒಬ್ಬ ಮಹಿಳೆ ದೇವಾಲಯಕ್ಕೆ ಹೋಗಿ ವಾಪಸ್ ಬಂದಿರುವುದು ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಸ್ಪಷ್ಟವಾಗಿದೆ. ಆಕೆಯ ಕಾಲಿನಲ್ಲಿ ಇದ್ದ ಚಪ್ಪಲಿಯೇ ದೇವರ ವಿಗ್ರಹದ ಮೇಲೆ ಪತ್ತೆಯಾಗಿದೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ. ಮಹಿಳೆ ಮಾನಸಿಕವಾಗಿ ಸ್ಥಿರವಾಗಿಲ್ಲ ಎಂಬ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಆಕೆ ಮೂಲತಃ ಎಲ್ಲಿಯವರು, ಯಾಕೆ ಹೀಗೆ ವರ್ತಿಸಿದರು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಹೇಳಿದರು.
ಎಸ್ಪಿ ಸುಜಿತಾ ಅವರ ಪ್ರಕಾರ, ʼಮಹಿಳೆಯನ್ನು ಪತ್ತೆಹಚ್ಚಲು ಎಂಟು ತನಿಖಾ ತಂಡಗಳನ್ನು ರಚಿಸಲಾಗಿದೆ. ಸ್ಥಳೀಯರ ಪ್ರಕಾರ ಆಕೆ ಆಗಾಗ ಬೇಲೂರಿನಲ್ಲಿ ಓಡಾಡುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ದೇವರ ಮೇಲಿದ್ದ ಹೂಗಳನ್ನು ತೆಗೆದು ಮಾರಾಟ ಮಾಡುತ್ತಿದ್ದಾಳೆ ಎಂದೂ ಕೆಲವರು ಹೇಳಿದ್ದಾರೆ. ಚಪ್ಪಲಿಗೆ ದಾರ ಕಟ್ಟಿ ಹಾಕಿದ ಘಟನೆ ಅಲ್ಲ, ಎರಡು ಚಪ್ಪಲಿಗಳನ್ನು ನೇರವಾಗಿ ವಿಗ್ರಹದ ಮೇಲೆ ಇಡಲಾಗಿದೆ ಎಂಬುದು ಪರಿಶೀಲನೆಯಲ್ಲಿ ಗೊತ್ತಾಗಿದೆʼ ಎಂದು ಎಸ್ಪಿ ತಿಳಿಸಿದರು.





